ಬೆಂಬಲ ಬೆಲೆಗಾಗಿ ಕೇಂದ್ರ ತಂಡಕ್ಕೆ ಮನವರಿಕೆ,  ರತ್ನಭಾರತ ರೈತ ಸಮಾಜದಿಂದ ಮನವಿ

IMG-20251016-WA0033-1.jpg
Published on

ಹುಬ್ಬಳ್ಳಿ: ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಿಂದಾದ ಸಮಸ್ಯೆ ಹಾಗೂ ಕೃಷಿ ಉತ್ಪನ್ನಗಳ ಬೆಲೆಗಳ ಕುರಿತು ಪರಿಶೀಲನೆಗೆ ಬಂದಿರುವ ಕೇಂದ್ರ ಸರ್ಕಾರದ ತಂಡಕ್ಕೆ ಇಲ್ಲಿನ ರೈತರು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯ ಅಗತ್ಯ ಕುರಿತು ಮನವರಿಕೆ ಮಾಡಿದ್ದಾರೆ.

ಪ್ರಸ್ತುತ ಎಪಿಎಂಸಿಗಳಲ್ಲಿ ಉಳ್ಳಾಗಡ್ಡಿಯನ್ನು ಪ್ರತಿ ಕ್ವಿಂಟಾಲ್ ಗೆ ಕೇವಲ ನೂರು, ಇನ್ನೂರು ರೂಪಾಯಿಗೆ ಖರೀದಿ ಮಾಡಲಾಗುತ್ತಿದೆ. ಇದರಲ್ಲಿ ಮಧ್ಯವರ್ತಿಗಳು ರೈತರಿಗೆ ವಂಚಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಕೂಡಲೇ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು. ಪ್ರತಿ ಕ್ವಿಂಟಾಲ್ ಗೆ ಕನಿಷ್ಠ 2500 ರೂ. ನಿಗದಿ ಮಾಡಿ ಖರೀದಿ ಆರಂಭಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕೇಂದ್ರದ ಕೃಷಿ ಮಂತ್ರಾಲಯದ ಅಧೀನ ಕಾರ್ಯದರ್ಶಿ ಮನೋಜ ಕೆ. ಅವರ ನೇತೃತ್ವದ ತಂಡ ಹುಬ್ಬಳ್ಳಿಗೆ ಆಗಮಿಸಿದ್ದು, ರೈತ ಮುಖಂಡರಿಂದ ಕೃಷಿಕರ ಸಮಸ್ಯೆ ಆಲಿಸಿದೆ.
ರತ್ನಭಾರತ ರೈತ ಸಮಾಜದ ವತಿಯಿಂದ ರಾಷ್ಟ್ರಿಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡ್ರ ಅವರು ಉಳ್ಳಾಗಡ್ಡಿಗೆ ಬೆಂಬಲ ಬೆಲೆ ನೀಡಿ ಕೂಡಲೇ ಖರೀದಿ ಆರಂಭಿಸಲು ಒತ್ತಾಯಿಸಿದರು.

ಇದೇ ರೀತಿ ಶೇಂಗಾ ಬೆಳೆಗೆ ಪ್ರತಿ ಕ್ವಿಂಟಾಲ್ ಗೆ ಕನಿಷ್ಠ ಬೆಂಬಲ ಬೆಲೆಯನ್ನು 9 ಸಾವಿರ ರೂ. ನಿಗದಿ ಮಾಡುವಂತೆ ಮನವಿ ಮಾಡಿದರು.
ಹುಬ್ಬಳ್ಳಿಗೆ ಆಗಮಿಸಿದ್ದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಭೇಟಿ ಮಾಡಿದ ಸಮಾಜದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ರೈತ ಮುಖಂಡರಾದ ಶಿವನಗೌಡ, ರಾಜಶೇಖರ ಪಾಟೀಲ, ಸುನೀಲ ಯಲಿಗಾರ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net