

ಮಡಿಕೇರಿ: ಕೋವಿಡ್ ಸಮಯದಲ್ಲಿ ನಿಲ್ಲಿಸಿದ್ದ ಮಡಿಕೇರಿ-ಕಿಕ್ಕರಳ್ಳಿ ಬಸ್ ಮಾರ್ಗವನ್ನು ಪುನರಾರಂಭಿಸುವಂತೆ ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರು ಹಾಗೂ ಶಾಸಕರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಗ್ರಾಮಸ್ಥರು, ಮಡಿಕೇರಿಯಿಂದ ಬೆಳಿಗ್ಗೆ ೧೦.೩೦ ಗಂಟೆಗೆ ಹೊರಟು ಕಿಕ್ಕರಳ್ಳಿಯವರೆಗೆ ಬಂದು ಮರಳಿ ಅದೇ ಮಾರ್ಗದಲ್ಲಿ ಮಡಿಕೇರಿಗೆ ಹೋಗುತ್ತಿದ್ದ ಬಸ್ ಮತ್ತು ಮಡಿಕೇರಿ ಮಾದಾಪುರ ತಾಕೇರಿ, ಸೋಮವಾರಪೇಟೆಗೆ ಬಿಡುತ್ತಿದ್ದ ಬಸ್‌ಗಳು ೨೦೧೮ರ ಜಲಪ್ರಳಯ ಮತ್ತು ಕೋವಿಡ್ ಸಮಯದಲ್ಲಿ ಮಾರ್ಗಸರಿ ಇಲ್ಲದೆ ಸ್ಥಗಿತಗೊಂಡಿತ್ತು. ಆದರೆ, ರಸ್ತೆ ಸರಿಯಾದರೂ ೨ ಬಸ್‌ಗಳು ಮತ್ತೆ ಈ ಮಾರ್ಗದಲ್ಲಿ ಸಂಚರಿಸಲೇ ಇಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಸ್ಥಳಿಯ ಶಾಸಕರು ಮತ್ತು ಸಂಬಂಧಪಟ್ಟ ಮಡಿಕೇರಿ ಘಟಕ ವ್ಯವಸ್ಥಾಪಕರಲ್ಲಿ ಹಲವು ಬಾರಿ ಮನವಿ ಮಾಡಿದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಸ್ಥಳೀಯ ಬಡ ನಿವಾಸಿಗಳು ತಮ್ಮ ಕೆಲಸ ಕಾರ್ಯಗಳಿಗೆ ತೆರಳಿ ಮನೆಗೆ ಹಿಂತಿರುಗುವಾಗ ಆಟೊಗೆ ರೂ.೩೦೦-೪೦೦ ಕೊಟ್ಟು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸೋಮವಾರಪೇಟೆ ತಾಲೂಕಿನ ಅರ್ಧಭಾಗದಷ್ಟು ಜನರಿಗೆ ಅನುಕೂಲವಾಗುವ ೨ ಬಸ್ ಮಾರ್ಗಗಳಲ್ಲಿ ಒಂದು ಬಸ್ ವ್ಯವಸ್ಥೆಯಾದರೂ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಡಿಕೇರಿಯಿಂದ ೧೧.೩೦ಕ್ಕೆ ಹೊರಟು ಮಾದಾಪುರ ಸೂರ್ಲಬ್ಬಿ, ಹರಗ, ತಾಕೇರಿ ಮಾರ್ಗವಾಗಿ ಸೋಮವಾರಪೇಟೆಗೆ ಬಸ್ ತೆರಳಬೇಕು. ಜತೆಗೆ ಈಗ ಬೆಳಿಗ್ಗೆ ಮಡಿಕೇರಿಯಿಂದ ೭.೩೦ಕ್ಕೆ ಮಡಿಕೇರಿ ಬಿಟ್ಟು ಸೂರ್ಲಬ್ಬಿ, ಶಾಂತಳ್ಳಿ, ಸೋಮವಾರಪೇಟೆ, ಕುಶಾಲನಗರ ಮತ್ತು ಇದೆ ಮಾರ್ಗವಾಗಿ ಹಿಂತಿರುಗುವ ಬಸ್ ಸಕಾಲಕ್ಕೆ ಬಾರದೆ ಶಾಲಾ ಮಕ್ಕಳಿಗೂ ರೈತರ ಕೆಲಸ ಕಾರ್ಯಕ್ಕೆ, ಕಛೇರಿಗೆ ತೆರಳುವವರಿಗೂ ತುಂಬಾ ತೊಂದರೆಯಾಗುತ್ತಿದೆ. ಈ ಬಸ್ಸನ್ನು ನಿಗದಿತ ಸಮಯಕ್ಕೆ ನಿತ್ಯ ಸಂಚರಿಸಲು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿರುವ ಗ್ರಾಮಸ್ಥರು, ಬೇಡಿಕೆ ಈಡೇರಿಸದಿದ್ದಲ್ಲಿ ಮಡಿಕೇರಿ ಘಟಕದಿಂದ ಹೊರಡುವ ಎಲ್ಲಾ ಬಸ್‌ಗಳನ್ನು ತಡೆದು ಧರಣಿ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಪತ್ರಿಕಾ ಪ್ರಕಟಣೆಯ ನೀಡುವ ಸಂದರ್ಭದಲ್ಲಿ ಗ್ರಾಮಸ್ಥರಾದ ರಾಜಪ್ಪ, ಗಣೇಶ್, ಸೋಮಣ್ಣ ಮತ್ತಿತರರು ಇದ್ದರು.