

ಹನುಮಸಾಗರ: ಗ್ರಾಮದ ಕೆರೆಗೆ ನೀರು ಬಿಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ಗ್ರಾಮ ಆಡಳಿತಾಧಿಕಾರಿ ಅಭಿಷೇಕ ಕರಡಿಗೆ ಮನವಿ ಸಲ್ಲಿಸಿದರು.
ಸಂಘದ ಸ್ಥಳೀಯ ಅಧ್ಯಕ್ಷ ಯಮನೂರಪ್ಪ ಮಡಿವಾಳರ ಮಾತನಾಡಿ, ಕಳೆದ ವರ್ಷ ಕೆರೆ ತುಂಬಿಸುವ ಯೋಜನೆಯಡಿ ನಮ್ಮ ಊರಿನ ಕೆರೆಗೆ ನೀರು ಬಿಡಲಾಗುತ್ತಿತ್ತು ಆದರೆ ಈಗ ಬಿಡುತ್ತಿಲ್ಲ. ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸರಿ ಅಲ್ಲ.
ನಮ್ಮ ಊರಿನ ಕೆರೆಗೆ ನೀರು ಬಿಡುವಂತೆ ಒತ್ತಾಯಿಸಿ ಕೆಲವು ದಿನಗಳ ಹಿಂದೆ ಹೋರಾಟ ಮಾಡಿ ಮನವಿ ಕೊಟ್ಟಿದ್ದೇವೆ. ಆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೂಡಲೇ 2-3 ದಿನಗಳಲ್ಲಿ ಹನುಮಸಾಗರ ಕೆರೆಗೆ ನೀರು ಬಿಡದಿದ್ದರೆ ಕಲಾಲಬಂಡಿ ಪಂಪ್‌ಹೌಸ್‌ಗೆ ಬೀಗ ಜಡಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರಾದ ದಾಮೋದರ ಹಯಗ್ರೀವ, ಶಿವಪುತ್ರಪ್ಪ ಕೋಳೂರ, ವೀರೇಶ ಕಟಗಿ, ಮುತ್ತಣ್ಣ ಹಲಕೂಲಿ ಇತರರಿದ್ದರು.