

ಹಾನಗಲ್ಲ: ಪಟ್ಟಣದ ಹೊರವಲಯದ ಪಾಳಾ ರಸ್ತೆಗೆ ಹೊಂದಿಕೊಂಡಿರುವ ಆಶ್ರಯ ನಿವೇಶನಗಳನ್ನು ಸರಿಯಾಗಿ ಅಳತೆ ಮಾಡಿಕೊಡುವಂತೆ ಸುಡಗಾಡಸಿದ್ದರು ಹಾಗೂ ಡೊಂಬರು ಸಮುದಾಯದವರು ತಹಸೀಲ್ದಾರ್ ಎಸ್.ರೇಣುಕಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
2020-21ರಲ್ಲಿ ನಿವೇಶನಗಳ ಹಕ್ಕುಪತ್ರದ ನಕಲು ಪ್ರತಿಗಳನ್ನು ಪುರಸಭೆ ವಿತರಿಸಿದೆ. ಪ್ರತಿ ನಿವೇಶನದ ಅಳತೆ 20*30 ಎಂದು ಹಕ್ಕುಪತ್ರದಲ್ಲಿ ನಮೂದಿಸಲಾಗಿದೆ. ಆದರೆ, ಹಂಚಿಕೆಯಾಗಿರುವ ನಿವೇಶನಗಳ ಅಳತೆ ಕಡಿಮೆಯಾಗಿದೆ. ಈ ಬಗ್ಗೆ ಹಲವು ಬಾರಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಮಸ್ಯೆ ಎದುರಾಗಿದೆ. ಇದರೊಂದಿಗೆ ಮೂಲಸೌಲಭ್ಯಗಳ ಕೊರತೆ ಇದೆ. ಪುರಸಭೆಯಿಂದ ಕುಡಿಯುವ ನೀರಿಗಾಗಿ ಯಾವುದೇ ಅನುಕೂಲ ಒದಗಿಸಿಲ್ಲ. ಜಮೀನಿನಲ್ಲಿರುವ ರೈತರ ಕೊಳವೆಬಾವಿ ಕೆಟ್ಟುಹೋದರೆ ನೀರಿಲ್ಲದೇ ಎಲ್ಲ ಕುಟುಂಬಗಳೂ ಪರಿತಪಿಸುವ ಪರಿಸ್ಥಿತಿ ಎದುರಾಗಲಿದೆ. ಕೂಡಲೇ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸುಡುಗಾಡುಸಿದ್ದರ ಸಮಾಜದ ಸೋಮಣ್ಣ ಕೂಡ್ಲಿಗಿ, ನಮ್ಮನ್ನು ಊರಿನ ಹೊರಭಾಗಕ್ಕೆ ಸ್ಥಳಾಂತರಿಸಿ ಯಾವುದೇ ಸೌಲಭ್ಯ ನೀಡದೇ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಹಳ್ಳಿ-ಪಟ್ಟಣಗಳಿಗೆ ತೆರಳಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ನಮಗೆ ಎರಡು ಹೊತ್ತಿನ ಊಟಕ್ಕೂ ತೊಂದರೆಯಿದೆ. ಇಂಥದ್ದರಲ್ಲಿ ಮೂಲಸೌಲಭ್ಯಗಳೂ ಇಲ್ಲದೆ ಜೀವನ ದೂಡುವಂತಾಗಿದೆ. ಕೂಡಲೇ ತಾಲೂಕು ಆಡಳಿತ ಅಗತ್ಯ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿದರು.
ದುರಗಪ್ಪ ಕರಿಯವರ, ವೀರೇಶ ಕೂಡ್ಲಿಗಿ, ದುರಗಪ್ಪ ವಿಭೂತಿ, ರಾಜು ಕಲ್ಯಾಣದವರ, ಚಂದ್ರಶೇಖರ ಒಂಟೆತ್ತಿನವರ, ಸಣ್ಣಹುಸೇನಪ್ಪ ಒಂಟೆತ್ತಿನವರ, ಇತರರಿದ್ದರು.