

ರೋಣ: ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆ ಹೆಸರು ಕಟಾವು ಪ್ರಾರಂಭವಾಗಿದೆ. ತಕ್ಷಣವೇ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಕೇಂದ್ರ ತೆರೆಯಬೇಕು ಎಂದು ರೈತರು ತಹಸೀಲ್ದಾರ್ ಕೆ.ನಾಗರಾಜ ಅವರಿಗೆ ಮನವಿ ಸಲ್ಲಿಸಿದರು.
ರೈತ ಅರ್ಜುನ ಕೊಪ್ಪಳ ಮಾತನಾಡಿ, ರೋಣ ಹೋಬಳಿಯಲ್ಲಿ ಶೇ. 54ರಷ್ಟು ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಸರ್ಕಾರ ಈಗಾಗಲೇ ಪ್ರತಿ ಕ್ವಿಂಟಾಲ್ಗೆ 8682 ರೂ. ಬೆಂಬಲ ಬೆಲೆ ಘೊಷಿಸಿದೆ. ಅದರಂತೆ ಕೇಂದ್ರ ತೆರೆದು ಹೆಸರು ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಕಳೆದ ವರ್ಷ ಬರದಿಂದಾಗಿ ರೈತರು ಸಾಕಷ್ಟು ಹಾನಿ ಅನುಭವಿಸಿದ್ದಾರೆ. ಪ್ರಸಕ್ತ ವರ್ಷ ಉತ್ತಮ ಫಸಲನ್ನು ನಿರೀಕ್ಷಿಸಲಾಗಿದ್ದು, ರೈತರ ಹಿತರಕ್ಷಣೆಗಾಗಿ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸುವುದು ಅಗತ್ಯವಾಗಿದೆ. ಜಿಲ್ಲಾ ಮತ್ತು ತಾಲೂಕು ಆಡಳಿತಗಳು ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ರೈತರಾದ ಎಂ.ಎಸ್. ನಾಯಕ, ವಿ.ಎಚ್. ಕೊಪ್ಪದ, ಎ.ಜಿ. ಬಂಗಾರಿ, ಬಸಪ್ಪ ಕೊಪ್ಪದ, ಮುತ್ತಪ್ಪ ಕೊಪ್ಪದ, ಅಬ್ದುಲ್ಸಾಬ್ ಹೊಸಮನಿ, ಹನುಮಪ್ಪ ಗಡಗಿ, ಬಿ.ಎಸ್. ಗಡಗಿ, ಎಸ್.ವೈ. ಗಡಗಿ, ನೀಲಪ್ಪ ಕೊಪ್ಪದ, ಅಶೋಕ ಗಡಗಿ, ಎಸ್.ವಿ. ಪರಸಣ್ಣವರ, ಇತರರು ಇದ್ದರು.</