ಇಸ್ಲಾಂ ಎಂದು ನಮೂದಿಸುವಂತೆ ಮನವಿ

K.A.YAKUB
Published on

ಮಡಿಕೇರಿ: ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಜನಗಣತಿಯ ಸಂದರ್ಭ ಜಿಲ್ಲೆಯ ಮುಸಲ್ಮಾನರು ಯಾವುದೇ ಗೊಂದಲಕ್ಕೊಳಗಾಗದೆ ಧರ್ಮದ ಕಾಲಂನಲ್ಲಿ ಇಸ್ಲಾಂ, ಜಾತಿ ಕಾಲಂನಲ್ಲಿ ಮುಸ್ಲಿಂ, ಉಪಜಾತಿ ಕಾಲಂನಲ್ಲಿ ತಮ್ಮ ಉಪಜಾತಿ ಮತ್ತು ಭಾಷೆಯ ಕಾಲಂನಲ್ಲಿ ನೀವಾಡುವ ಭಾಷೆಯನ್ನು ನಮೂದಿಸುವಂತೆ ಕೊಡಗು ಜಿಲ್ಲಾ ಮುಸ್ಲಿಂ ಯೂನಿಟಿ ಅಧ್ಯಕ್ಷ ಕೆ.ಎ.ಯಾಕುಬ್ ಅವರು ಮನವಿ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯೊಂದಿಗೆ ಜನಗಣತಿಗೆ ರಾಜ್ಯ ಸರಕಾರ ಈಗಾಗಲೇ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮುಸ್ಲಿಂ ಸಮುದಾಯದ ೧೨೪ ಉಪಜಾತಿಗಳ ಪಟ್ಟಿಯನ್ನು ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿದೆ. ಇದರಲ್ಲಿರುವ ಯಾವುದೇ ಉಪಜಾತಿಗೆ ಸೇರಿದವರಾಗಿದ್ದಲ್ಲಿ ಆಯಾ ಉಪಜಾತಿಯನ್ನು ನಮೂದಿಸಬಹುದೆಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಿಕ್ಷೆ-೨೦೨೫ ಕುಟುಂಬ ಅನುಸೂಚಿಗಾಗಿ ತಯಾರಿಸಲಾದ ಮಾದರಿ ನಮೂನೇ ಅರ್ಜಿಯಲ್ಲಿ ಕುಟುಂಬದ ಮುಖ್ಯಸ್ಥರ ಮಾಹಿತಿ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಕುಟುಂಬದ ಪಡಿತರ ಚೀಟಿ ಸಂಖ್ಯೆ, ಕುಟುಂಬದ ಎಲ್ಲಾ ಸದಸ್ಯರುಗಳ ಆಧಾರ್ ಸಂಖ್ಯೆ, ಎಲ್ಲಾ ಸದಸ್ಯರುಗಳ ಚುನಾವಣಾ ಗುರುತಿನ ಚೀಟಿ ಸಂಖ್ಯೆ ಸೇರಿದಂತೆ ಧರ್ಮ, ಜಾತಿ, ಉಪಜಾತಿಗಳ ಮಾಹಿತಿ ತಪ್ಪದೆ ಗಣತಿ ಸಂದರ್ಭ ನೀಡಬೇಕು ಮತ್ತು ಸರಕಾರದ ನಿಯಮವನ್ನು ಪಾಲಿಸಬೇಕು ಎಂದು ಕೆ.ಎ.ಯಾಕುಬ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net