

ತುಮಕೂರು: ನಗರದ ಬಿಜಿಎಸ್ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಅವಕಾಶ ನೀಡುವಂತೆ ಕೋರಿ ಶುಕ್ರವಾರ ತುಮಕೂರು ಮಹಾನಗರ ಪಾಲಿಕೆ ಮೇಯರ್ ಫರೀದಾ ಬೇಗಂ, ಉಪಮೇಯರ್ ಶಿಶಿಕಲಾ ಅವರಿಗೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಪಾಲಿಕೆ ಸದಸ್ಯರ ಜತೆ ಆಗಮಿಸಿ ಮನವಿ ಸಲ್ಲಿಸಿದರು.
ದೇಶದಲ್ಲಿ ಅತ್ಯಂತ ಸುರಕ್ಷಿತ ಸ್ಥಳವಾಗಿರುವ ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡ ಜಯಂತಿ ಶನಿವಾರ ನಡೆಯುತ್ತಿದ್ದು, ಈ ಸ್ಮರಣಾರ್ಥವಾಗಿ ತುಮಕೂರಿನಲ್ಲಿ ಪ್ರತಿಭೆ ಸ್ಥಾಪಿಸಲು ನಿರ್ಣಯ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ತುಮಕೂರು ನಗರದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುವ ಮೂಲಕ ಅವರ ಜಾತ್ಯತೀತ ಸೇವೆಯನ್ನು ತುಮಕೂರು ಜಿಲ್ಲೆಯ ಜನರು ಸ್ಮರಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಕೆಂಪೇಗೌಡ ಪ್ರತಿಮೆ ಆನಾವರಣಗೊಳಿಸಬೇಕೆಂಬುದು ಜನಾಂಗದ ಮುಖಂಡರ ತೀರ್ಮಾನವಾಗಿದ್ದು, ಈ ನಿಟ್ಟಿನಲ್ಲಿ ನಗರಪಾಲಿಕೆಯ ಆವರಣ ದಲ್ಲಿರುವ ಉದ್ಯಾನವನದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡಬೇಕು ಎಂದರು.
ಮೇಯರ್ ಫರೀದಾಬೇಗಂ ಮಾತನಾಡಿ, ಜುಲೈನಲ್ಲಿ ನಡೆಯುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ, ಸದಸ್ಯರು ಒಪ್ಪಿಗೆ ಪಡೆದು ಶೀಘ್ರದಲ್ಲಿಯೇ ಜಾಗ ಗೊತ್ತು ಮಾಡಿ ತಿಳಿಸಲಾಗುವುದು ಎಂಬ ಭರವಸೆಯನ್ನು ಶಾಸಕರಿಗೆ ಮತ್ತು ನಿಯೋಗದಲ್ಲಿದ್ದ ಸದಸ್ಯರಿಗೆ ತಿಳಿಸಿದರು.
ಅವಕಾಶ ಸಿಕ್ಕ ನಂತರ ಹಾಗೂ ಕೋವಿಡ್ ಸಮಸ್ಯೆ ಬಗೆಹರಿದ ತಕ್ಷಣ ಸುಮಾರು 50 ಸಾವಿರ ಜನರನ್ನು ಒಗ್ಗೂಡಿಸಿ, ಅದ್ದೂರಿ ಕಾರ್ಯಕ್ರಮದ ಮೂಲಕ ಪ್ರತಿಮೆ ಸ್ಥಾಪನೆಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಗೌರಿಶಂಕರ್ ಹೇಳಿದರು. ಪಾಲಿಕೆ ಸದಸ್ಯ ಮಂಜುನಾಥ್, ಧರಣೇಂದ್ರಕುಮಾರ್, ಕುಮಾರ್, ಮನು ಮತ್ತಿತರರು ಇದ್ದರು.