

ಆರ್.ತುಳಸಿಕುಮಾರ್
ಬೆಂಗಳೂರು: ಪೀಣ್ಯ ಕೈಗಾರಿಕೆ ಎಸ್ಟೇಟ್‌ಗೆ ನೀಡಿರುವ ವಿಶೇಷ ಹೂಡಿಕೆ ವಲಯ (ಎಸ್‌ಐಆರ್) ಸ್ಥಾನಮಾನದ ಬೆನ್ನಲ್ಲೇ, ಅಲ್ಲಿನ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್‌ಎಸ್‌ಐಡಿಸಿ) ಹಂಚಿಕೆ ಮಾಡಿರುವ ಘಟಕಗಳನ್ನು ಅಧಿಸೂಚನೆಯಿಂದ ಹೊರಗಿಟ್ಟಿರುವ ಮಾಹಿತಿ ಬಹಿರಂಗವಾಗಿದೆ.
ರಾಜ್ಯ ಸರ್ಕಾರದ ಈ ನಡೆಯಿಂದ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಕೈಗಾರಿಕೋದ್ಯಮಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದೇ ಸ್ಥಳದಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃಧ್ಧಿ ಮಂಡಳಿ (ಕೆಐಎಡಿಬಿ) ಹಾಗೂ ಕೆಎಸ್‌ಐಐಡಿಸಿ ಮೂಲಕ ಪ್ಲಾಟ್‌ಗಳನ್ನು ಹಂಚಿಕೆ ಮಾಡಿದ್ದರೂ, ಹಾಲಿ ಹೊರಡಿಸಿರುವ ಅಧಿಸೂಚನೆ ಅನ್ವಯ 1,461.5 ಎಕರೆ ವ್ಯಾಪ್ತಿಯಲ್ಲಿ ಕೆಐಎಡಿಬಿ ಪ್ಲಾಟ್‌ಗಳಿಗೆ ಮಾತ್ರ ಅನ್ವಯವಾಗಲಿದೆ. ಉಳಿದಂತೆ ಕೆಎಸ್‌ಎಸ್‌ಐಡಿಸಿಯ 300 ಎಕರೆ ವಿಸ್ತೀರ್ಣದಲ್ಲಿರುವ ಸುಮಾರು 1,500 ಘಟಕಗಳು ಮಾನ್ಯತೆಯಿಂದ ವಂಚಿತವಾಗಿವೆ. ಈ ತಾರತಮ್ಯ ಏಕೆ ಎಂಬ ಜಿಜ್ಞಾಸೆ ಉದ್ಯಮ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ಪೀಣ್ಯ ಕೈಗಾರಿಕೆ ಪ್ರದೇಶವನ್ನು ಟೌನ್‌ಶಿಪ್ ಮಾದರಿಯಲ್ಲಿ ಅಭಿವೃಧ್ಧಿಪಡಿಸುವುದು ಸರ್ಕಾರದ ಆಶಯವಾಗಿದೆ. ಇದನ್ನು ಗಮನಿಸಿಯೇ ಇಡೀ ಪೀಣ್ಯ ಇಂಡಸ್ಟ್ರೀಯಲ್ ಎಸ್ಟೇಟ್‌ಗೆ ಟೌನ್‌ಶಿಪ್ ಲಾಭ ಸಿಗಲು ಸಂಪುಟದ ತೀರ್ಮಾನವಾಗಿತ್ತು. ಆದರೆ, ಎಸ್‌ಐಆರ್ ಅಧಿಸೂಚನೆಯಲ್ಲಿ ಕೆಎಸ್‌ಎಸ್‌ಐಡಿಸಿ ಪ್ಲಾಟ್‌ಗಳನ್ನು ಸೇರ್ಪಡೆ ಮಾಡದಿರುವುದು ಅಲ್ಲಿನ ಘಟಕಗಳು ಅತಂತ್ರ ಸ್ಥಿತಿಗೆ ತಲುಪಲಿದೆ ಎಂಬ ಆತಂಕ ಉದ್ಯಮದಾರ ವಲಯದಿಂದ ಕೇಳಿಬಂದಿದೆ.
ಸರ್ಕಾರಕ್ಕೆ ಶೀಘ್ರ ಮನವಿ ಸಲ್ಲಿಕೆ:
ಎಸ್‌ಐಆರ್ ಸ್ಥಾನಮಾನದ ಬಗ್ಗೆ ಅಧಿಸೂಚನೆಯಲ್ಲಿನ ಅಂಶಗಳನ್ನು ಆಧರಿಸಿ ತಾರತಮ್ಯ ಆಗಿದ್ದಲ್ಲಿ ಅಂತಹ ತಪ್ಪು ಸರಿಪಡಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಪೀಣ್ಯ ಕೈಗಾರಿಕೆ ಸಂಘ ಮುಂದಾಗಿದೆ. ಇಡೀ ಪೀಣ್ಯ ಕೈಗಾರಿಕೆ ಪ್ರದೇಶ ಒಂದು ಘಟಕವನ್ನಾಗಿ ಗುರುತಿಸಬೇಕು. ಇದರ ಆಧಾರದ ಮೇಲೆಯೇ ಮೂಲಸೌಕರ್ಯ ಕಲ್ಪಿಸಬೇಕು. ಬೃಹತ್, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಘಟಕಗಳ ವಿಚಾರದಲ್ಲಿ ಭೇದ ಭಾವ ತೋರದೆ ಎಲ್ಲವನ್ನೂ ಕೈಗಾರಿಕೆ ಎಂಬುದಾಗಿಯೇ ಭಾವಿಸಿ ಅಭಿವೃಧ್ಧಿಪಡಿಸಬೇಕಿದೆ. ಈ ಬಗ್ಗೆ ನಾವು ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ ಮೂಲಕ ಸರ್ಕಾರಕ್ಕೆ ಮನವಿ ಮಾಡುವುದಾಗಿ ಸಂಘದ ಅಧ್ಯಕ್ಷ ಆರ್.ಶಿವಕುಮಾರ್ ಅವರು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ವಿಶೇಷ ಹೂಡಿಕೆ ವಲಯದ ಮಾನ್ಯತೆಯು ಕೆಎಸ್‌ಎಸ್‌ಐಡಿಸಿ ಪ್ಲಾಟ್‌ಗಳಿಗೂ ಅನ್ವಯಿಸುವ ಬಗ್ಗೆ ಪರಿಷ್ಕೃತ ರೂಪದಲ್ಲಿ ಅಥವಾ ಪ್ರತ್ಯೇಕ ಅಧಿಸೂಚನೆ ಹೊರಡಿಸಿದರೆ ನಮ್ಮ ಅಭ್ಯಂತರ ಇಲ್ಲ. ಎಲ್ಲ ಘಟಕಗಳಿಗೆ ಟೌನ್‌ಶಿಪ್ ಲಾಭ ದೊರೆತರೆ ಸಾಕು ಎಂಬ ಆಶಯವನ್ನೂ ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ.
ಮಂಡಳಿ ಶೀಘ್ರ ಸ್ಥಾಪನೆಯಾಗಲಿ:
ಪೀಣ್ಯ ಕೈಗಾರಿಕೆಗಳಿಗೆ ಎಸ್‌ಐಆರ್ ಅಧಿಸೂಚನೆ ಆಗಿರುವುದರಿಂದ ಅಲ್ಲಿನ ಎಲ್ಲ ಆಗುಹೋಗುಗಳನ್ನು ಹಾಲಿ ಸ್ಥಳೀಯ ಸಂಸ್ಥೆ ಬದಲು ಹೊಸದಾಗಿ ರಚನೆಯಾಗಲಿರುವ ಪ್ರಾದೇಶಿಕ ಅಭಿವೃಧ್ಧಿ ಪ್ರಾಧಿಕಾರ (ಆರ್‌ಡಿಎ) ವಹಿಸಿಕೊಳ್ಳಲಿದೆ. ಅದಕ್ಕಾಗಿ ಶೀಘ್ರವೇ ಪ್ರಾಧಿಕಾರ ರಚನೆಯಾಗಬೇಕಿದೆ. ಈ ಪ್ರಾಧಿಕಾರದಲ್ಲಿ 13 ಮಂದಿ ಅಧಿಕಾರಿ/ಪರಿಣಿತರು ಹಾಗೂ ಇಬ್ಬರು ಉದ್ಯಮಿಗಳಿಗೆ ಸ್ಥಾನ ನೀಡಲಾಗಿದೆ. ಆರ್‌ಡಿಎ ಅನ್ನು ಚೇರ್‌ಮನ್, ಸಿಇಒ ಹಾಗೂ ಜನರಲ್ ಮ್ಯಾನೇಜರ್ - ಈ ಮೂವರು ಹಿರಿಯ ಅಧಿಕಾರಿಗಳು ಮುನ್ನಡೆಸಲಿದ್ದಾರೆ. ಹಾಗಾಗಿ ಇವರ ನೇಮಕವನ್ನು ಸರ್ಕಾರ ನೇಮಕ ಮಾಡಬೇಕಿದೆ. ಉಳಿದವರನ್ನು ನಿಯಮ ಆಧರಿಸಿ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ ನಿಯುಕ್ತಿ ಮಾಡಬೇಕಾಗುತ್ತದೆ.
ಉದ್ಯಮದ ಪ್ರಾತಿನಿಧ್ಯ ಹೆಚ್ಚಿಸಲಿ:
ಎಸ್‌ಐಆರ್ ಕಾರ್ಯನಿರ್ವಹಣೆಗೆ ರಚಿಸಲಿರುವ ಆರ್‌ಡಿಎನಲ್ಲಿ ಒಟ್ಟು 15 ಮಂದಿ ಇರಲಿದ್ದಾರೆ. ಈ ಪೈಕಿ ಇಬ್ಬರು ಮಾತ್ರ ಕೈಗಾರಿಕೋದ್ಯಮಿಗಳು ಇರಲಿದ್ದಾರೆ. ಈ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಬೇಕು ಎಂಬುದು ಪೀಣ್ಯ ಕೈಗಾರಿಕೆ ಸಂಘದ ಬೇಡಿಕೆಯಾಗಿದೆ. ಮೂಲಸೌಕರ್ಯ ಸೇರಿ ಇತರ ವಿಷಯಗಳಲ್ಲಿ ತೀರ್ಮಾನ ಕೈಗೊಳ್ಳಲು ಕೈಗಾರಿಕೆಗಳನ್ನು ಪ್ರತಿನಿಧಿಸುವ ಉದ್ಯಮಿಗಳಿಂದ ಸಲಹೆ-ಸೂಚನೆ ಪಡೆಯುವುದು ಅಗತ್ಯ. ಹೀಗಾಗಿ ಆರ್‌ಡಿಎನಲ್ಲಿ ಉದ್ಯಮದವರ ಪ್ರಾತಿನಿಧ್ಯ ಹೆಚ್ಚಿಸಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಕಾಮಗಾರಿ ಕುಂಠಿತ:
ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಕೆಎಸ್‌ಎಸ್‌ಐಡಿಸಿ ಮೂಲಕ 100 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈ ಕೆಲಸವು ದಾಸರಹಳ್ಳಿ ಹಾಗೂ ರಾಜರಾಜೇಶ್ವರಿನಗರ ಮತಕ್ಷೇತ್ರಕ್ಕೆ ಸೇರಿದ ಕೈಗಾರಿಕೆ ಪ್ರಾಂಗಣದಲ್ಲಿ ತಲಾ 50 ಕೋಟಿ ರೂ. ವೆಚ್ಚ ಕಾಮಗಾರಿಗೆ ಮಂಜೂರು (2023) ಆಗಿದೆ. ಸದ್ಯ ದಾಸರಹಳ್ಳಿ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ, ಆರ್.ಆರ್.ನಗರ ವ್ಯಾಪ್ತಿಯಲ್ಲಿ ಶೇ.10ರಷ್ಟು ಕೆಲಸವೂ ಆಗಿಲ್ಲ. ನಾನಾ ಕಾರಣ ಒಡ್ಡಿ ಅಲ್ಲಿನ ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿ ಮುಂದುವರಿಸಲು ಸಹಕರಿಸುತ್ತಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ. ಈ ವಿಚಾರದಲ್ಲಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ಬಾಕಿ ಕೆಲಸ ಪೂರ್ಣಗೊಳಿಸಲು ಸೂಚಿಸಬೇಕು ಎಂದು ಕೈಗಾರಿಕೋದ್ಯಮಿಗಳು ಒತ್ತಾಯಿಸಿದ್ದಾರೆ.