

ಮಡಿಕೇರಿ: ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ನವೀಕರಣ ಭರಾಟೆಯಲ್ಲಿ ದೇವಾಲಯದ ಪಾವಿತ್ರತ್ಯೆಗೆ ಧಕ್ಕೆಯಾಗದಂತೆ ಕಾಪಾಡಬೇಕು ಎಂದು ದೇವತಕ್ಕರಾದ ಪರದಂಡ ಕೆ.ಸುಬ್ರಮಣಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಮುಂಭಾಗದಲ್ಲಿ ಪೂರ್ವಭಾಗಕ್ಕಿರುವ ಮೆಟ್ಟಿಲುಗಳನ್ನು ನವೀಕರಣಗೊಳಿಸಲಾಗಿದೆ. ಆದರೆ ಅನಾದಿಕಾಲದಿಂದಲೂ ಈ ಮೆಟ್ಟಿಲು ಏರುವುದನ್ನು ನಿಷೇಸಲಾಗಿದೆ. ವಿಶೇಷ ಸಂದರ್ಭದಲ್ಲಿ (ಸತ್ಯಪ್ರಮಾಣ ಮಾಡುವ ಸಂದರ್ಭ) ಮಾತ್ರ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಏರಲು ಅವಕಾಶವಿರುತ್ತದೆ. ಆದರೆ, ಈ ಮೆಟ್ಟಿಲನ್ನು ಕೆಲವರು ಹೆಬ್ಬಾಗಿಲಾಗಿ ಬಿಂಬಿಸಿ ಭಕ್ತಾದಿಗಳಿಗೆ ಪ್ರವೇಶ ಕಲ್ಪಿಸಲು ಯತ್ನ ನಡೆಸುತ್ತಿದ್ದಾರೆ. ಆದ್ದರಿಂದ ಭಕ್ತಾದಿಗಳು ದೇವಾಲಯದ ವಾಯುವ್ಯ ದಿಕ್ಕಿನಲ್ಲಿರುವ ದ್ವಾರದ ಮೂಲಕ ಆಗಮಿಸಿ ಪಾವಿತ್ರತ್ಯೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದೇವತಕ್ಕ ಮತ್ತು ಭಕ್ತಜನ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ದೇವತಕ್ಕ ವಿಠಲ ಭೀಮಯ್ಯ, ಪರದಂಡ ಕುಟುಂಬದ ಪಟ್ಟೆದಾರ ಮತ್ತು ತಕ್ಕಮುಖ್ಯಸ್ಥ ಪರದಂಡ ಬಿ.ಅಪ್ಪಣ್ಣ, ದೇವತಕ್ಕರಾದ ಪರದಂಡ ಮುದ್ದು ಸುಬ್ರಮಣಿ, ಪರದಂಡ ಸದಾ ನಾಣಯ್ಯ ಉಪಸ್ಥಿತರಿದ್ದರು.