

ಹುಬ್ಬಳ್ಳಿ: ವಿಶೇಷ ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ಧಾರವಾಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ವಿಶೇಷ ಶಿಕ್ಷಕರ ಸಂಘದ ವತಿಯಿಂದ ನಗರದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಮನವಿಗೆ ಕೂಡಲೇ ಸ್ಪಂದಿಸಿದ ಸಭಾಪತಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಆಯುಕ್ತ ಡಾ. ತ್ರಿಲೋಕಚಂದ್ರ ಅವರಿಗೆ ದೂರವಾಣಿ ಕರೆ ಮಾಡಿ, ವಿಶೇಷ ಶಿಕ್ಷಕರಾದ ಚಿತ್ರಕಲೆ, ನಾಟಕ, ನೃತ್ಯ, ವೃತ್ತಿ ಹಾಗೂ ಸಂಗೀತ ಶಿಕ್ಷಕರು ರಾಜ್ಯ ಪ್ರತಿ ಪ್ರೌಢಶಾಲೆಯ ಮಕ್ಕಳಿಗೆ ಅಗತ್ಯವಾಗಿ ಬೇಕು. ಯಾವುದೇ ಕಾರಣಕ್ಕೂ ಇವರನ್ನು ಹೆಚ್ಚುವರಿ ಮಾಡಬಾರದು ಎಂದು ಸೂಚಿಸಿದರು.