

ವಿಜಯವಾಣಿ ಸುದ್ದಿಜಾಲ ಉಡುಪಿ
ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ವಿವಿಧ ಆಸ್ಪತ್ರೆಗಳು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕರ್ನಾಟಕ ಆರೋಗ್ಯ ಸಂಜೀವಿನಿಯನ್ನು ಸಕ್ಷಮ ಪ್ರಾಧಿಕಾರದ ಮೂಲಕ ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿ ಈ ಭಾಗದ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ಸೂಕ್ತ ವೈದ್ಯಕೀಯ ಸೇವೆ ಲಭಿಸಲು ತೊಡಕಾಗುತ್ತಿವೆ ಎಂದು ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಉಡುಪಿಯ ಗೃಹ ಕಚೇರಿಯಲ್ಲಿ ಮನವಿ ಸಲ್ಲಿಸಿ, ವೈದ್ಯಕೀಯ ಸೇವೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು ರಾಜ್ಯ ಸರ್ಕಾರದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಪರಿಶೀಲಿಸಿ, ಒಪ್ಪಂದದೊಂದಿಗೆ ಖಾಸಗಿ ಆಸ್ಪತ್ರೆಗಳನ್ನೂ ಸಹ ಈ ಯೋಜನೆಯಡಿ ನೋಂದಾಯಿಸಲು ಆದೇಶಿಸಲಾಗಿದೆ. ಆದರೆ, ಜಿಲ್ಲೆಯ ಎರಡು ಆಸ್ಪತ್ರೆ ಮಾತ್ರ ನೋಂದಣಿ ಮಾಡಿಕೊಂಡಿದೆ ಎಂದು ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆನಂದ ಜತ್ತಣ್ಣ, ಜಿಲ್ಲಾ ಖಜಾಂಜಿ ದಯಾನಂದ ಬೆನ್ನೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧಮೇರ್ಂದ್ರ ಎಸ್., ಸಂಘದ ನಿರ್ದೇಶಕರಾದ ಶ್ರೀಕಾಂತ್ ಹಾಗೂ ದೀಪಾ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಸಂಘದ ಕಾಪು ತಾಲೂಕು ಅಧ್ಯಕ್ಷ ಬಸವರಾಜ, ನಿರ್ದೇಶಕ ಅಚ್ಯುತ್ ಭಟ್ ಉಪಸ್ಥಿತರಿದ್ದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಆದರ್ಶ ಆಸ್ಪತ್ರೆ, ಹೈಟೆಕ್ ಆಸ್ಪತ್ರೆ, ಸಿಟಿ ಹಾಸ್ಪಿಟಲ್, ಪ್ರಸಾದ್ ನೇತ್ರಾಲಯ, ಕುಂದಾಪುರದ ಚಿನ್ಮಯಿ ಹಾಸ್ಪಿಟಲ್ ಸೇರಿದಂತೆ ಆಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ಆಸ್ಪತ್ರೆಗಳಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ನೋಂದಣಿಯಾಗಬೇಕು. ಅದರಿಂದ ಜಿಲ್ಲೆಯ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಕುಟುಂಬದವರಿಗೆ ನಿರಾಂತಕವಾಗಿ ವೈದ್ಯಕೀಯ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ. | ದಿನಕರ ಶೆಟ್ಟಿ ಅಂಪಾರು. ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳ ರೋಗಿಗಳಿಗೆ ಉಡುಪಿ ಜಿಲ್ಲೆಯಲ್ಲಿರುವ ಅನೇಕ ಆಸ್ಪತರೆಗಳು ಆದ್ಯತೆ ಹಾಗೂ ಆಸರೆಯಾಗಿವೆ. ಆದರೆ, ಅತ್ಯಾಧುನಿಕ ಆರೋಗ್ಯ ವ್ಯವಸ್ಥೆ ಹೊಂದಿರುವ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ನೋಂದಣಿಯಾಗಿಲ್ಲ. ಹೀಗಾಗಿ ಈ ಭಾಗದ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ನಿರಾಸೆ ಉಂಟಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ತಾವು ಜಿಲ್ಲೆಯ ಸರ್ಕಾರಿ ನೌಕರರಿಗೆ ಯೋಜನೆಯಡಿ ವೈದ್ಯಕಿಯ ಸೌಲಭ್ಯ ಲಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.