

ಮಡಿಕೇರಿ: ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡಿ ಪ್ರವಾಸಿಗರ ಸುರಕ್ಷತೆ ಹಾಗೂ ಅವರ ಪ್ರವಾಸ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮಕೈಗೊಳ್ಳುವಂತೆ ಕೊಡಗು ಜಿಲ್ಲಾ ಹೋಟೆಲ್ ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದ ಪ್ರಮುಖರು, ಜಿ ಚೇಂಬರ್ ಆಫ್ ಕಾಮರ್ಸ್, ಹೋಂಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಡಿಕೇರಿ ವ್ಯಾಪ್ತಿಯ ಪ್ರವಾಸಿ ತಾಣ ಅಬ್ಬಿ ಫಾಲ್ಸ್ನಲ್ಲಿ ಕೆಲವರು ಶನಿವಾರ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಸಂಘಸಂಸ್ಥೆಗಳ ಪ್ರಮುಖರು, ಪ್ರವಾಸಿಗರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಸೋಮವಾರ ಮನವಿ ಸಲ್ಲಿಸಿದರು.
ಈ ಘಟನೆಯಿಂದ ಪ್ರವಾಸಿಗರಿಗೆ ಕೊಡಗಿನಲ್ಲಿ ಸೂಕ್ತ ರಕ್ಷಣೆ ಇಲ್ಲ ಎಂಬ ಅಭಿಪ್ರಾಯ ಪ್ರವಾಸಿ ವಲಯದಲ್ಲಿ ವ್ಯಕ್ತವಾಗುತ್ತಿದ್ದು ಕೊಡಗಿಗೆ ಬರುವ ಪ್ರವಾಸಿಗರ ಸಂಖ್ಯೆ ಕುಗ್ಗಿ ಹೋಗುವ ಸಾಧ್ಯತೆಯೂ ಇದೆ. ಹೀಗಾಗಿ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಕೊಡುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಗಮನಹರಿಸಿ ಅಭ್ಬಿಫಾಲ್ಸ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿ ಕೊಡಗಿಗೆ ಬರುವಂತ ಪ್ರವಾಸಿಗರಿಗೆ ರಕ್ಷಣೆ ನೀಡಬೇಕಾಗಿ ಮನವಿ ಮಾಡಲಾಯಿತು.
ಪ್ರವಾಸಿಗರ ಮೇಲಿನ ಹಲ್ಲೆಯ ಘಟನೆಯನ್ನು ಕೂಲಂಕುಶವಾಗಿ ವಿಚಾರಣೆ ನಡೆಸಿ ನ್ಯಾಯ ಕೊಡಿಸಬೇಕಾಗಿ ವಿನಂತಿ ಮಾಡಿರುವ ಸಂಘದ ಪದಾಧಿಕಾರಿಗಳು, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದು ಎಂದೂ ಆಗ್ರಹಿಸಿದರು. ಈಗಾಗಲೇ ನಾಲ್ಕೈದು ವರ್ಷದಿಂದ ಕೊಡಗಿನ ವ್ಯಾಪಾರವಹಿವಾಟಿಗಳು ಭೂ ಕುಸಿತ ಹಾಗೂ ಕೋವಿಡ್ ಲಾಕ್ ಡೌನ್ ನಂತರದ ದಿನಗಳಲ್ಲಿ ಆರ್ಥಿಕವಾಗಿ ಕೊಡಗಿನ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಇಂಥ ಘಟನೆಗಳಿಂದಾಗಿ ಪ್ರವಾಸೋದ್ಯಮ ಮತ್ತಷ್ಟು ಸಮಸ್ಯೆಗೆ ಸಿಲುಕುವ ಅಪಾಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕೆಂದು ಪ್ರಮುಖರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿಸತೀಶ್ ಮತ್ತು ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಪ್ರತಿಕ್ರಿಯಿಸಿ, ಪ್ರವಾಸಿಗರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಲುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಹೋಟೆಲ್ ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಕಾರ್ಯದರ್ಶಿ ನಾಜಿರ್ ಅಹಮ್ಮದ್, ಖಜಾಂಜಿ ಕೆ.ಕೆ.ಭಾಸ್ಕರ್, ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್, ಸಂಘಟನಾ ಕಾರ್ಯದರ್ಶಿ ಮೋಂತಿ ಗಣೇಶ್, ಹೋಂಸ್ಟೇ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಬಿ.ಜಿ.ಅನಂತಶಯನ ಇದ್ದರು.