

ಶಿವಮೊಗ್ಗ: ತಾಲೂಕಿನ ಹಾರನಹಳ್ಳಿ ಹೋಬಳಿ ನಾಗರಬಾವಿ ಗ್ರಾಮದಲ್ಲಿ 150 ವರ್ಷಗಳಿಂದ ವಾಸವಾಗಿರುವ ಜಮೀನನ್ನು ಸರ್ಕಾರಿ ಪಡ ಎಂದು ಬದಲಾಯಿಸಲು ತಹಸೀಲ್ದಾರ್ ಅವರಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ಮಂಗಳವಾರ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರಬಾವಿ ಗ್ರಾಮದ ಸರ್ವೆ ನಂ.2/1 ರಲ್ಲಿ 1.17 ಎಕರೆ ಮತ್ತು 2/4 ರಲ್ಲಿ 1.4 ಎಕರೆ ಭೂಮಿ 150 ವರ್ಷಗಳಿಂದಲೂ ಜನವಸತಿ ಪ್ರದೇಶವಾಗಿದೆ. ಇಲ್ಲಿ ಮನೆಗಳು ಹಾಗೂ ಮಸೀದಿ ಇದೆ. ನಾವು ಭೂ ಅತಿಕ್ರಮಣ ಮಾಡಿಕೊಂಡಿದ್ದೇವೆ ಎಂದು ಇಬ್ಬರು ವ್ಯಕ್ತಿಗಳು ನಮ್ಮನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಅವರಿಂದ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದರು.
ಇದಕ್ಕೆ ಸಂಬಂಧಿಸಿ ಉಪವಿಭಾಗಾಧಿಕಾರಿಗೂ ದೂರು ಸಲ್ಲಿಸಲಾಗಿತ್ತು. 2011ರಲ್ಲಿ ಪ್ರಕರಣ ದಾಖಲಿಸಿಕೊಂಡು ಆ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿದ್ದರು. ಸರ್ವೇ ಮಾಡಲು ಆದೇಶಿಸಿದ್ದರು. ಇಲ್ಲಿ ಜನವಸತಿ ಪ್ರದೇಶ ಇರುವುದು ನಕಾಶೆಯಲ್ಲಿ ಗುರುತು ಮಾಡಿ ಸರ್ವೇ ಸಿಬ್ಬಂದಿ ವರದಿ ನೀಡಿದ್ದರು. ಹಾರನಹಳ್ಳಿ ಗ್ರಾಪಂನಿಂದ ನೀಡಿದ ವರದಿ ಆಧಾರದಲ್ಲಿ ತಾಪಂನಿಂದ ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961ರ ಪ್ರಕಾರ ಭೂ ಸ್ವಾಧೀನ ಪಡಿಸಿಕೊಳ್ಳಲು ತಹಸೀಲ್ದಾರ್ ಅವರಿಗೆ ರವಾನೆ ಮಾಡಲಾಗಿತ್ತು. ಆದರೆ ತಹಸೀಲ್ದಾರ್ ಈ ಮನವಿಯನ್ನು ಪುರಸ್ಕರಿಸಿಲ್ಲ ಎಂದು ದೂರಿದರು.
ಖಾಸಗಿ ವ್ಯಕ್ತಿಗಳು ಯಾವುದೇ ಸಂದರ್ಭದಲ್ಲಿ ನಮ್ಮನ್ನು ಒಕ್ಕಲೆಬ್ಬಿಸುವ ಸಾಧ್ಯತೆಗಳಿವೆ. ಹೀಗಾಗಿ ಈ ಜಾಗವನ್ನು ಸರ್ಕಾರಿ ಪಡ ಎಂದು ನಮೂದು ಮಾಡಲು ತಹಸೀಲ್ದಾರ್ ಅವರಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಸ್ಥಳೀಯರಾದ ಉಬೇದುಲ್ಲಾ, ಶಬ್ಬೀರ್, ಸಿರಿಜಾನ್ ಮೆಹಬೂಬ್‌ಸಾಬ್, ಜಿಯಾವುಲ್ಲಾ, ಮುನೀರ್ ಅಹಮದ್, ಸನಾವುಲ್ಲಾ, ಮಹಮ್ಮದ್ ದಸ್ತಗೀರ್, ಜಾವಿದ್ ಅಹಮದ್ ಹ್ಯಾಪಿಜಾಬಿ ಇತರರಿದ್ದರು.