ವಿಶ್ವಕರ್ಮ ಅಧ್ಯಯನ ಪೀಠ ಘೋಷಿಸಲು ಆಗ್ರಹ

vishwakarma download
Published on

ಮೈಸೂರು: ರಾಜ್ಯ ಸರ್ಕಾರ ಪ್ರಸ್ತಕ ಬಜೆಟ್‌ನಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿಶ್ವಕರ್ಮ ಅಧ್ಯಯನ ಪೀಠ ಘೋಷಿಸಬೇಕು ಎಂದು ಜಿಲ್ಲಾ ವಿಶ್ವಕರ್ಮ ಸಂಘ ಆಗ್ರಹಿಸಿದೆ.


ವಿಶ್ವವಿದ್ಯಾಲಯದ ಮಟ್ಟದಲ್ಲಿ ವಿಶ್ವಕರ್ಮ ಸಮಾಜ ಮತ್ತು ಸಂಸ್ಕೃತಿ ಕುರಿತಾದ ಅಧ್ಯಯನಗಳು ಕಡಿಮೆ ಇವೆ. ಹೀಗಾಗಿ ಹೆಚ್ಚಿನ ಮಟ್ಟದಲ್ಲಿ ಅಧ್ಯಯನ ನಡೆಯಬೇಕಾಗಿದೆ. ಇದಕ್ಕೆ ಮೈಸೂರು ವಿಶ್ವವಿದ್ಯಾಲಯ ಸೂಕ್ತ ಸ್ಥಳವಾಗಿದ್ದು, ಇಲ್ಲಿ ಹೆಚ್ಚಿನ ಸವಲತ್ತುಗಳು ಸಿಗುತ್ತವೆ. ಆದ್ದರಿಂದಾಗಿ ಇಲ್ಲಿಯೇ ವಿಶ್ವಕರ್ಮ ಅಧ್ಯಯನ ಪೀಠ ಸ್ಥಾಪನೆ ಮಾಡಿದ್ದಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಸಮುದಾಯದವರು ಬಂದು ಹೋಗಲು ಅನುಕೂಲವಾಗುತ್ತದೆ ಎಂದು ಸಂಘದ ಮುಖಂಡ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಮಂಟೇಲಿಂಗಾಚಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ನೀಡಬೇಕು. ಪಂಚ ಕುಲಕಸುಬುಗಳಿಗೆ ಆರ್ಥಿಕ ಅನುಕೂಲ ಮಾಡಿಕೊಡಬೇಕು. ರಾಜ್ಯದಲ್ಲಿ ಸುಮಾರು ವಿಶ್ವಕರ್ಮ ಸಮುದಾಯದ 40 ಲಕ್ಷ ಜನಸಂಖ್ಯೆಯಿದ್ದು, ರಾಜಕೀಯವಾಗಿ ಹಿಂದುಳಿದಿರುವುದರಿಂದ ಕಾಂಗ್ರೆಸ್‌ನಲ್ಲಿರುವ ಸಮುದಾಯದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ರಾಜಕೀಯ ಸ್ಥಾನಮಾನ ನೀಡಬೇಕೆಂದು ಮನವಿ ಮಾಡಿದರು.


ಸಂಘದ ಮುಖಂಡರಾದ ಸಿದ್ದಚಾರ್, ರಿಷಿ ವಿಶ್ವಕರ್ಮ, ಸಿ.ಟಿ.ಆಚಾರ್ಯ, ಜಯರಾಮಚಾರ್, ಎಂ.ಮೊಗಣ್ಣಾಚಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net