

ಮಂಡ್ಯ: ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ನೌಕರರ ನ್ಯಾಯಯುತ ಬೇಡಿಕೆಗಳನ್ನು ಅಧ್ಯಯನ ಮಾಡಿ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸಲು ತಜ್ಞರ ತಂಡ ರಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಮನವಿ ಪತ್ರ ಬರೆದಿರುವ ದಿನೇಶ್ ಗೂಳಿಗೌಡ, ಸರ್ಕಾರದ ಬೆಂಬಲದಿಂದ ಗ್ರಾಮ ಪಂಚಾಯತಿಗಳು ಗ್ರಾಮ ಸರ್ಕಾರಗಳಂತೆ ಕಾರ್ಯ ನಿರ್ವಹಿಸುವತ್ತ ಹೆಜ್ಜೆ ಇಡುತ್ತಿವೆ. ಜನನ-ಮರಣ ಪ್ರಮಾಣ ಪತ್ರದಿಂದ ಹಿಡಿದು ವಸತಿ ಯೋಜನೆಗಳ ಅನುಷ್ಠಾನ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ನೈರ್ಮಲ್ಯ ಸ್ವಚ್ಛತೆ, ಸ್ವಾವಲಂಬನೆಗೆ ನೆರವು ನೀಡುವುದರ ಜತೆಗೆ 29 ವಿಷಯ ಒಳಗೊಂಡಂತೆ ಗ್ರಾಪಂ ಸಾರ್ವಜನಿಕರಿಗೆ ಸೇವೆ ನೀಡುತ್ತಾ ಗ್ರಾಮೀಣ ಜನರ ಬದುಕಿಗೆ ನೆರವಾಗುತ್ತಿವೆ. ಆದರೆ, ಈಗ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಮ್ಮ ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ಆರ್‌ಡಿಪಿಆರ್ ಕುಟುಂಬದ ವಿವಿಧ ಸಂಘಟನೆಗಳ ಮುಖ್ಯಸ್ಥರನ್ನು ಸಾಧ್ಯವಾದಷ್ಟು ಶೀಘ್ರವಾಗಿ ಆಹ್ವಾನಿಸಿ ಸಭೆ ನಡೆಸಿ ಅವರ ಬೇಡಿಕೆಗಳನ್ನು ಪರೀಶೀಲನೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.