

ಲಕ್ಷ್ಮೇಶ್ವರ: ಪಟ್ಟಣದ ಚಾವಡಿಯಿಂದ ಬ್ರಹ್ಮದೇವರ ವೃತ್ತದವರೆಗೆ ಸಿಸಿ ರಸ್ತೆ ಮಾಡಲು ರಸ್ತೆಯನ್ನು ಅಗೆದು ಎರಡು ತಿಂಗಳಾದರೂ ಕಾಮಗಾರಿ ಕೈಗೊಳ್ಳಲು ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೊಪಿಸಿ ಪಟ್ಟಣದ ಬಜಾರ ವ್ಯಾಪಾರಸ್ಥರ ಸಂಘದವರು ಮಂಗಳವಾರ ಪುರಸಭೆ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ರಸ್ತೆ ಕಾಮಗಾರಿ ವಿಳಂಬದಿಂದ ಆಗುತ್ತಿರುವ ತೊಂದರೆ ನಿಮ್ಮ ಗಮನಕ್ಕಿಲ್ಲವೆ? ವ್ಯಾಪಾರಸ್ಥರ ಮನವಿಗೆ ಸ್ಪಂದಿಸುತ್ತಿಲ್ಲ. ಮಳೆಗಾಲ ಪ್ರಾರಂಭವಾಗಿದ್ದು, ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗುತ್ತಿದೆ. ಇದರಿಂದಾಗಿ ವ್ಯಾಪಾರ ಕುಂಠಿತವಾಗುತ್ತಿದ್ದು ಈ ಬಗ್ಗೆ ಪುರಸಭೆಯವರು ಕ್ರಮ ಕೈಗೊಳ್ಳುತ್ತಿಲ್ಲವೇಕೆ? ನಿರ್ಲಕ್ಷ್ಯ ಧೋರಣೆ ಮುಂದುವರಿಸಿದರೆ ಬಜಾರ ಬಂದ್ ಮಾಡಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮಹೇಶ ಹಡಪದ, ರಸ್ತೆ ಕಾಮಗಾರಿಗೆ ತಂದಿರುವ ಮಣ್ಣು ಗುಣಮಟ್ಟದಲ್ಲಿಲ್ಲ ಎನ್ನುವ ದೂರಿನ ಹಿನ್ನೆಲೆಯಲ್ಲಿ ಅದನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ತಕ್ಷಣ ಗುತ್ತಿಗೆದಾರರನ್ನು ಕರೆಯಿಸಿ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದರು.
ಈ ಮಾತಿಗೆ ಒಪ್ಪದ ವ್ಯಾಪಾರಸ್ಥರು, ಮಣ್ಣು ಪರೀಕ್ಷೆಗೆ ತಿಂಗಳುಗಟ್ಟಲೆ ಕಾಯಬೇಕೆ? ಎರಡು ಮೂರು ದಿನದಲ್ಲಿ ಮಣ್ಣು ಪರೀಕ್ಷೆ ವರದಿ ಬರುತ್ತದೆ. ಆದರೆ, ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಿರಿ ಎಂದು ಅಕ್ರೋಶ ವ್ಯಕ್ತಪಡಿಸಿದರು.
ನಂತರ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಪಟ್ಟಣದ ಪ್ರಮುಖ ಗಟಾರ ಸ್ವಚ್ಛಗೊಳಿಸಬೇಕು. ಬಜಾರ ರಸ್ತೆಯ ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವದು, ಫುಟ್‌ಪಾತ್‌ಗೆ ಹೊಂದಿಕೊಂಡು ವ್ಯಾಪಾರ ಮಾಡುವುದನ್ನು ನಿಯಂತ್ರಿಸಬೇಕು. ಪ್ರಮುಖ ರಸ್ತೆಗಳನ್ನು ಕೂಡಲೇ ದುರಸ್ತಿಪಡಿಸಬೇಕು ಎಂದು ಅಗ್ರಹಿಸಲಾಗಿದೆ.
ಒಂದು ವಾರದೊಳಗೆ ಸಿಸಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು. ಪುರಸಭೆ ಸದಸ್ಯ ರಾಜೀವ ಕುಂಬಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ವ್ಯಾಪಾರಸ್ಥರ ಸಂಘ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ, ಅಶೋಕ್ ಬಟಗುರ್ಕಿ, ಮಲ್ಲಿಕಾರ್ಜುನ ಮಹಾಂತಶೆಟ್ಟರ, ಧರ್ವಚಂದ ಮುಥಾ, ಆದಿನಾಥ ಬರಿಗಾಲಿ, ಮಾಲತೇಶ ಅಗಡಿ, ಸಂತೋಷ ಗೋಗಿ, ಡಿ.ವಿ. ಹಿರೇಮಠ, ದೀಪು ಬಟಗುರ್ಕಿ, ರವಿ ಪುರಾಣಿಕಮಠ, ನಾಗರಾಜ ಚಿಂಚಲಿ, ಶಕ್ತಿ ಕತ್ತಿ, ವೈಭವ ಗೋಗಿ, ಪ್ರಭು ನವಲೆ, ರಂಜಿತ್ ಜೈನ್, ನಾಗನಗೌಡ ಪಾಟೀಲ್, ಟಾಕಪ್ಪ ಸಾತಪುತೆ, ಜ್ಞಾನೋಬಾ ಬೋಮಲೆ ಇತರರಿದ್ದರು.