

ಹುಬ್ಬಳ್ಳಿ: ಯುವ ಸಮೂಹಕ್ಕೆ ಮಾರಕವಾಗಿರುವ ಆನ್‌ಲೈನ್ ಬೆಟ್ಟಿಂಗ್, ರಮ್ಮಿ ಮುಂತಾದ ಆ್ಯಪ್‌ಗಳನ್ನು ಶೀಘ್ರವೇ ರದ್ದುಗೊಳಿಸುವಂತೆ ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ನಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಇದಕ್ಕೂ ಮೊದಲು ನಮ್ಮ ಕರ್ನಾಟಕ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ಅಮೃತ ಇಜಾರಿ ಮಾತನಾಡಿ, ಆನ್‌ಲೈನ್ ಬೆಟ್ಟಿಂಗ್ ಜಾಲಕ್ಕೆ ವಿದ್ಯಾರ್ಥಿಗಳು, ಯುವಕರು ಸಿಕ್ಕು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಈ ನಿಟ್ಟಿನಲ್ಲಿ ದೇಶದ ಕೆಲ ರಾಜ್ಯಗಳಲ್ಲಿ ಬೆಟ್ಟಿಂಗ್, ಆನ್‌ಲೈನ್ ಆ್ಯಪ್‌ಗಳನ್ನು ನಿಷೇಧ ಮಾಡಲಾಗಿದೆ. ನಮ್ಮ ರಾಜ್ಯ ಸರ್ಕಾರವೂ ನಿಷೇಧ ಮಾಡಬೇಕೆಂದು ಆಗ್ರಹಿಸಿದರು.
ಬಸವರಾಜ ದೇವರಮನಿ, ಮಹೇಶ ಪತ್ತಾರ, ಶೀತಲ ಮಲಗಾವಿ, ಸಿದ್ದು ಸಫಾರೆ, ಮನೋಹರ ಸಫಾರೆ, ಬಸವರಾಜ ಸಾಲಿ, ಹಿತೇಶ ರಾಠೋಡ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.