ದೀಪಾವಳಿಗೆ ಹೆಚ್ಚುವರಿ ರೈಲು ಆರಂಭಿಸಲು ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಮನವಿ

train
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಪ್ರಯಾಣಿಕರ ಅನುಕೂಲತೆಗೆ ದೀಪಾವಳಿ ಹಬ್ಬದ ಸಂದರ್ಭ ಮಂಗಳೂರು ಹಾಗೂ ರಾಜಧಾನಿ ಬೆಂಗಳೂರು ನಡುವೆ ಹೆಚ್ಚುವರಿ ರೈಲು ಆರಂಭಿಸುವಂತೆ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದೆ.
ಪ್ರಸ್ತುತ ಬಂದರು ನಗರ ಮಂಗಳೂರು ಮತ್ತು ರಾಜಧಾನಿ ಬೆಂಗಳೂರು ನಡುವೆ ಕೆಲವೇ ರೈಲುಗಳು ಸಂಚರಿತ್ತಿವೆ. ಅವುಗಳಲ್ಲಿ ದಿನಂಪ್ರತಿ ಸಂಚರಿಸುತ್ತಿರುವ ರೈಲುಗಳಿಗೆ ದೀರ್ಘವಾದ ಕಾದಿಸಿದ ಪ್ರಯಾಣಿಕರ ಪಟ್ಟಿಗಳಿವೆ. ವಿವಿಧ ಕಾರಣಗಳಿಂದ ಕರಾವಳಿಯ ದೊಡ್ಡ ಸಂಖ್ಯೆಯ ಜನರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಈ ಜನರು ದಸರಾ, ದೀಪಾವಳಿ ಮುಂತಾದ ಹಬ್ಬಗಳ ಸಂದರ್ಭ ಅಧಿಕ ಸಂಖ್ಯೆಯಲ್ಲಿ ಮಂಗಳೂರು ಮತ್ತು ಬೆಂಗಳೂರು ನಡುವೆ ಓಡಾಡುವುದು ಸಾಮಾನ್ಯ. ಆದ್ದರಿಂದ ಈ ಬೇಡಿಕೆ ಪೂರೈಸಲು ಸಾಧ್ಯವಾಗುವಂತೆ ದೀಪಾವಳಿ ಸಂದರ್ಭ ಪ್ರಸ್ತಾವಿತ ಉಭಯ ನಿಲ್ದಾಣಗಳ ನಡುವೆ ಹೆಚ್ಚುವರಿ ರೈಲು ಆರಂಭಿಸುವಂತೆ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

  • 2 ರಾತ್ರಿ ರೈಲು ಬೇಡಿಕೆ
    ಹಬ್ಬದ ಸಂದರ್ಭ ಪ್ರಯಾಣಿಕರಿಗೆ ಕನಿಷ್ಠ ಎರಡು ರಾತ್ರಿ ರೈಲು ಆರಂಭಿಸಬೇಕು. ಒಂದು ರೈಲು ಅಕ್ಟೋಬರ್ 30 ರಂದು ರಾತ್ರಿ ಬೆಂಗಳೂರಿನಿಂದ ಹೊರಟು ಮರುದಿನ ರಾತ್ರಿ ಈ ರೈಲು ಮಂಗಳೂರಿನಿಂದ ವಾಪಾಸು ಬೆಂಗಳೂರಿಗೆ ಹಿಂತಿರುಗಬೇಕು. ಇನ್ನೊಂದು ರೈಲು ನವೆಂಬರ್ 1 ರಂದು ರಾತ್ರಿ ಬೆಂಗಳೂರಿನಿಂದ ಹೊರಟು ನವೆಂಬರ್ 2 ರಂದು ಮಂಗಳೂರು ತಲುಪಬೇಕು ಮತ್ತು ಈ ರೈಲು ನವೆಂಬರ್ 3 ರಂದು ಮಂಗಳೂರಿನಿಂದ ವಾಪಾಸು ಬೆಂಗಳೂರಿಗೆ ಮರಳಬೇಕು ಎನ್ನುವ ಬೇಡಿಕೆಯನ್ನು ಮನವಿಯಲ್ಲಿ ಮುಂದಿಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net