

ಬೆಂಗಳೂರು: ಪಾರಂಪರಿಕ ಕಟ್ಟಡವಾಗಿರುವ ರಾಜಭವನವನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಿವಂತೆ ಕೋರಿ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆಯು ವಿಧಾನಮಂಡಲದ ಅರ್ಜಿ ಸಮಿತಿಯ ಮೊರೆ ಹೋಗಿದೆ.
ರಾಜಭವನವು ಮೈಸೂರು ಅರಮನೆಗಿಂತ ಹಿಂದೆಯೇ ನಿರ್ಮಿತಗೊಂಡು ಪಾರಂಪರಿಕ ಕಟ್ಟಡ ಎನಿಸಿದೆ. ರಾಜಾಡಳಿತ ಮುಗಿದು ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ನಂತರ ಅರಮನೆಯನ್ನು ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಟ್ಟು ಪ್ರವಾಸಿ ತಾಣವಾಗಿಯೂ ಮಾರ್ಪಡಿಸಲಾಗಿದೆ. ಆದರೆ, ರಾಜಭವನವನ್ನು ರಾಜ್ಯಪಾಲರ ಅಧಿಕೃತ ನಿವಾಸವನ್ನಾಗಿ ಮಾಡಿ ಈಗಲೂ ಕಾರ್ಯಾಚರಿಸಲಾಗುತ್ತಿದೆ. ಆದರೂ ಮಾಜಿ ರಾಜ್ಯಪಾಲ ವಿ.ಎಸ್.ರಮಾದೇವಿಯವರು ರಾಜಭವನವನ್ನು ‘ಜನಭವನ’ವನ್ನಾಗಿ ಬದಲಾಯಿಸಿ ಜನಮನ್ನಣೆ ಗಳಿಸಿದ್ದರು.
ಇದರಿಂದ ರಾಜಭವನದ ಕಟ್ಟಡದ ಸೌಂದರ್ಯ ಆಸ್ವಾದಿಸುವ ಹಾಗೂ ಪಾರಂಪರಿಕ ಕಟ್ಟಡ ಬಗ್ಗೆ ವಾಸ್ತುಶಿಲ್ಪ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಆಕರ ಮಾಹಿತಿ ಪಡೆಯಲು ಸಾಧ್ಯವಿದೆ. ಹಾಗಾಗಿ ರಾಜಭವನವನ್ನು ನಾಗರಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂಬುದಾಗಿ ವೇದಿಕೆಯ ಅಧ್ಯಕ್ಷ ಬಿ.ಎಂ.ಶಿವಕುಮಾರ್ ಅರ್ಜಿ ಸಮಿತಿಗೆ ಮನವಿ ಮಾಡಿದ್ದಾರೆ.