ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹ

20adarshkdga1
Published on

ಮಡಿಕೇರಿ: ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದ್ದು, ಈ ಬಗ್ಗೆ ಸರ್ಕಾರ ಕೂಡಲೇ ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪದಿಂದ ರೈತರಿಗೆ ತುಂಬಲಾರದ ನಷ್ಟವಾಗುತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಹಾಗೂ ರಾಜ್ಯ ಸರ್ಕಾರದ ಎಸ್‌ಡಿಆರ್‌ಎಫ್ ವತಿಯಿಂದ ನೀಡುವ ಪರಿಹಾರ ಏನೇನೂ ಸಾಲದು. ರಾಜ್ಯ ಸರ್ಕಾರ ವಿಶೇಷವಾಗಿ ಕೊಡಗಿಗೆ ನುರಿತ ತಜ್ಞರ ತಂಡವನ್ನು ಕಳುಹಿಸಿ ಸಮಗ್ರ ಸಮೀಕ್ಷೆ ನಡೆಸಿ ಆ ಮೂಲಕ ಕೊಡಗಿಗೆ ಪ್ರಕೃತಿ ವಿಕೋಪದ ನಷ್ಟದ ಬಗ್ಗೆ ವರದಿ ಪಡೆದು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಹಾಗಾದಲ್ಲಿ ಮಾತ್ರ ರೈತರ ಸಮಸ್ಯೆ ಪರಿಹಾರ ಸಾಧ್ಯ ಎಂದು ಡಿಸಿ ಗಮನ ಸೆಳೆದರು.
ಪ್ರಕೃತಿ ವಿಕೋಪದಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸುತ್ತಿರುವುದರಿಂದ ರೈತರಿಗೆ ನಷ್ಟದ ಮೇಲೆ ನಷ್ಟವಾಗುತ್ತಿದೆ. ಇದರಿಂದ ಕೃಷಿಕರ ಬದುಕು ದುಸ್ತರವಾಗಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರ ಮೂರು ಪಟ್ಟು ಹೆಚ್ಚಿಸಬೇಕು. ವಿಶೇಷ ತಜ್ಞರ ತಂಡ ರಚನೆ ಸಂದರ್ಭ ಕಂದಾಯ, ಕೃಷಿ, ತೋಟಗಾರಿಕೆ, ಕಾಫಿ ಬೋರ್ಡ್ ಇಲಾಖೆಯೊಂದಿಗೆ ಆಯಾ ಭಾಗದ ಅನುಭವಿ ರೈತರನ್ನು ಒಳಗೊಂಡ ಸಮಿತಿ ರಚಿಸಬೇಕು. ಈ ತಂಡ ಪ್ರಕೃತಿ ವಿಕೋಪದಲ್ಲಿ ನಷ್ಟ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿ ವರದಿಯನ್ನು ಸರ್ಕಾರಕ್ಕೆ ಕಳುಹಿಸುವಂತಾಗಬೇಕು ಎಂದು ಮನವಿ ಮಾಡಿದರು.

ಶೇ.33ರಷ್ಟು ಹೆಚ್ಚು ಬೆಳೆ ನಷ್ಟಗೊಂಡಲ್ಲಿ ಮಾತ್ರ ಪರಿಹಾಕ್ಕೆ ಸರ್ಕಾರ ನೀಡಿರುವ ಮಾರ್ಗ ಸೂಚಿ ಸುತ್ತೋಲೆ ತಕ್ಷಣ ಬದಲಾಯಿಸಬೇಕು. ಸತತ 3 ವರ್ಷದಿಂದ ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಬೆಳೆ ಹಾನಿ, ಆಸ್ತಿಪಾಸ್ತಿ ನಷ್ಟ ಅನುಭವಿಸುತ್ತಲೇ ಬಂದಿರುವುದರಿಂದ ಸುತ್ತೋಲೆ ನ್ಯಾಯಸಮ್ಮತವಾಗಿರುವುದಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮಾಯಮುಡಿ ಸಂಚಾಲಕ ಪುಚ್ಚಿಮಾಡ ರಾಯ್ ಮಾದಪ್ಪ ಇನ್ನಿತರ ಪ್ರಮುಖರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net