ಪಿಂಚಣಿ ಸೌಲಭ್ಯ ಕಲ್ಪಿಸಲು ನೌಕರರ ಮನವಿ

2-RNR-05
Published on

ಹಾವೇರಿ: ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ವತಿಯಿಂದ ಭಾನುವಾರ ಶಾಸಕ ನೆಹರು ಓಲೇಕಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

2006 ಏ. 1ರ ಪೂರ್ವದಲ್ಲಿ ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ಮತ್ತು 2006 ಏ. 1ರ ನಂತರ ನೇಮಕವಾಗಿ ವೇತನ ಪಡೆಯುತ್ತಿರುವ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಯಾವುದೇ ರೀತಿಯ ಪಿಂಚಣಿ ಸೌಲಭ್ಯವಿಲ್ಲ. ಆದರೆ, 2006 ಏ. 1ಕ್ಕೂ ಮೊದಲು ಪಿಂಚಣಿ ವಿಚಾರದಲ್ಲಿ ಅನುದಾನಿತ ಮತ್ತು ಸರ್ಕಾರಿ ನೌಕರರ ಮಧ್ಯೆ ಯಾವುದೇ ತಾರತಮ್ಯ ಇರಲಿಲ್ಲ. ಮತ್ತು ಬೇರೆ ರಾಜ್ಯಗಳು ಈಗಲೂ ವೇತನದ ಜತೆಗೆ ಪಿಂಚಣಿಯನ್ನೂ ನೀಡುತ್ತಿವೆ.

6ನೇ ವೇತನ ಆಯೋಗವು ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ಸಾವಿರಾರು ನೌಕರರು ಕೊನೆಯ ತಿಂಗಳ ಸಂಬಳ ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತಿ ಆಗಿದ್ದಾರೆ. ಕೆಲವರು ಅಕಾಲಿಕ ಮರಣ ಹೊಂದಿದ್ದಾರೆ. ಆದ್ದರಿಂದ ಎಲ್ಲರಿಗೂ ಪಿಂಚಣಿ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಜಿ. ಹನುಮಂತಪ್ಪ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಪ್ರಮುಖರಾದ ಬಸಪ್ಪ ಕೊರಗ, ಎಂ.ಎಸ್. ಭತ್ತದ, ಎಫ್.ಎಚ್. ಕೊರವರ, ರಾಮನಗೌಡರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net