

ಬಂಟ್ವಾಳ: ತಾಲೂಕಿನ ವಿವಿಧೆಡೆಗಳಲ್ಲಿ ನಡೆಯುವ ಕಬಡ್ಡಿ ಪಂದ್ಯಾಟಗಳಿಗೆ ತಡರಾತ್ರಿ ತನಕ ಅನುಮತಿ ನೀಡದಂತೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್, ಕಬಡ್ಡಿ ತೀರ್ಪುಗಾರರ ಮಂಡಳಿ ವತಿಯಿಂದ ಮನವಿ ನೀಡಲಾಯಿತು.
ಮನವಿ ಸ್ವೀಕರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿಗೆ ಸಕರತ್ಮಾಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಪ್ರತಿ ಠಾಣೆಗಳಿಗೆ ಕೂಡಲೇ ಸ್ಪಷ್ಟ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಬಂಟ್ವಾಳ ಅಮೆಚೂರ್ ಕಬಡ್ಡಿ ಅಸೋಸಿಯೇಶನ್, ತೀರ್ಪುಗಾರ ಮಂಡಳಿಯ ನಿಯೋಗ ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಪೂಂಜಾಲಕಟ್ಟೆ, ವಿಟ್ಲ ಪೊಲೀಸ್ ಠಾಣೆಗಳಿಗೂ ತೆರಳಿ ಮನವಿ ಸಲ್ಲಿಸಿದರು. ತಡರಾತ್ರಿ ತನಕದ ಪಂದ್ಯಾಟಗಳಿಂದ ಕ್ರೀಡಾಪಟುಗಳಿಗೆ ಆಗುವ ತೊಂದರೆ, ಪಂದ್ಯಾಟದ ವೇಳೆ ನಡೆಯುವ ಅಹಿತಕರ ಟನೆ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ, ಠಾಣಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಪುಷ್ಪರಾಜ್ ಚೌಟ, ಬಂಟ್ವಾಳ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ತೀರ್ಪುಗಾರರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ, ಸಂಚಾಲಕ ಹಬೀಬ್ ಮಾಣಿ, ಸದಸ್ಯರಾದ ದೀಪಕ್ ಪೆರಾಜೆ, ಸಿದ್ದಿಕ್ ಕುಕ್ಕಾಜೆ ಉಪಸ್ಥಿತರಿದ್ದರು.