

ಶಿರಸಿ: ರಾಜ್ಯ ಸರ್ಕಾರ ಈ ಹಿಂದೆ ಪ್ರಕಟಿಸಿದ ನಿಲುವಿನೊಂದಿಗೆ ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರಿಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಬೆಂಗಳೂರಿನಲ್ಲಿ ಬುಧವಾರ ಮನವಿ ಸಲ್ಲಿಸಿದರು.
ಅರಣ್ಯ ಹಕ್ಕು ಕಾಯ್ದೆ ಅಡಿ ತಿರಸ್ಕೃತವಾಗಿರುವ ಅರ್ಜಿದಾರರನ್ನು ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಿ, ಅತಿಕ್ರಮಣ ಪ್ರದೇಶವನ್ನು ಅರಣ್ಯೀಕರಣ ಮಾಡಬೇಕೆಂದು ಎಂಟು ಪರಿಸರವಾದಿ ಸಂಘಟನೆಗಳು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ. ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ ಮಹತ್ವದ ವಿಚಾರಣೆ ನಡೆಯುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಧಾನ ಸಂಚಾಲಕ ಜೆ.ಎಂ.ಶೆಟ್ಟಿ ಅಚವೆ ಇತರರಿದ್ದರು.
ಏ.27, 1978ರ ನಂತರ 3 ಎಕರೆವರೆಗೆ (ಒತ್ತುವರಿ ಭೂಮಿ ಸೇರಿ) ಅರಣ್ಯ ಒತ್ತುವರಿ ಮಾಡಿದರಿಗೆ ಪುನರ್ವಸತಿ ವ್ಯವಸ್ಥೆ ಪ್ಯಾಕೇಜ್ ಕಲ್ಪಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಶೀಲಿಸಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಗಿರುವ ಅರಣ್ಯ ಒತ್ತುವರಿಗಳಲ್ಲಿ, ಒತ್ತುವರಿ ಭೂಮಿ ಮತ್ತು ಆತನ ಪಟ್ಟಾ ಭೂಮಿ ಸೇರಿ 3 ಎಕರೆಗಿಂತ ಕಡಿಮೆ ಇರುವ ಒತ್ತುವರಿದಾರರನ್ನು ಒಕ್ಕಲೆಬ್ಬಿಸಬಾರದೆಂಬ ರಾಜ್ಯ ಸರ್ಕಾರ 2015ರಲ್ಲಿ ಹೊರಡಿಸಿದ ಅಂಶಕ್ಕೆ ಸಂಬಂಧಿಸಿದಂತೆ, ಈಗಾಗಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈ ಕುರಿತು ಸರ್ಕಾರದ ನಿಲುವನ್ನು ಸಾರ್ವತ್ರಿಕವಾಗಿ ಪ್ರಕಟಿಸಿದ್ದಾರೆ. ಈ ಅಂಶವನ್ನು ಒಳಗೊಂಡು ಸರ್ಕಾರವು ತಿದ್ದುಪಡಿ ಪ್ರಮಾಣ ಪತ್ರದಲ್ಲಿ ಉಲ್ಲೆಖೀಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.