ರಟ್ಟಿಹಳ್ಳಿ ತಾಲೂಕಿಗೆ ವಾಲ್ಮೀಕಿ ಆಶ್ರಮ ವಸತಿ ಶಾಲೆ ಮಂಜೂರಿಗೆ ಮನವಿ

memorandam to minister
Published on

ರಟ್ಟಿಹಳ್ಳಿ: ರಟ್ಟಿಹಳ್ಳಿ ತಾಲೂಕಿಗೆ ಮಹರ್ಷಿ ವಾಲ್ಮೀಕಿ ಆಶ್ರಮ ವಸತಿ ಶಾಲೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘದ ವತಿಯಿಂದ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಎಸ್ಟಿ ಕಲ್ಯಾಣ ಖಾತೆ ಸಚಿವ ಬಿ. ನಾಗೇಂದ್ರ ಅವರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.

ಹಿರೇಕೆರೂರ ಮತ್ತು ರಟ್ಟಿಹಳ್ಳಿ ತಾಲೂಕಿನಲ್ಲಿ ವಾಲ್ಮೀಕಿ ನಾಯಕ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಬಡತನದಿಂದ ಕೂಡಿರುವ ಈ ಜನಾಂಗದ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ರಟ್ಟಿಹಳ್ಳಿ ತಾಲೂಕಿಗೆ ಹೊಸ ಮಹರ್ಷಿ ವಾಲ್ಮೀಕಿ ಆಶ್ರಮ ವಸತಿ ಶಾಲೆ ಮಂಜೂರು ಮಾಡುವುದರಿಂದ ಎರಡೂ ತಾಲೂಕಿನ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಪ್ರಸ್ತುತ ಹಾವೇರಿ ಜಿಲ್ಲೆಯಲ್ಲಿ ಬ್ಯಾಡಗಿ ಮತ್ತು ರಾಣೆಬೆನ್ನೂರ ತಾಲೂಕಿನಲ್ಲಿ ಎರಡು ವಸತಿ ಶಾಲೆಗಳಿವೆ. ರಟ್ಟಿಹಳ್ಳಿ ತಾಲೂಕಿಗೆ ವಸತಿ ಶಾಲೆ ಮಂಜೂರು ಮಾಡುವುದರಿಂದ 1ರಿಂದ 7ನೇ ತರಗತಿಯಲ್ಲಿ ಕಲಿಯುವ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸ್ವೀಕರಿಸಿದ ಸಚಿವ ಬಿ. ನಾಗೇಂದ್ರ, ಕ್ಷೇತ್ರದ ಶಾಸಕ ಯು.ಬಿ. ಬಣಕಾರ ಅವರಿಗೆ ವಸತಿ ಶಾಲೆ ಮಂಜೂರಿಗೆ ಮನವಿ ಸಲ್ಲಿಸಿ, ಪ್ರಸ್ತಾವನೆ ಕಳುಹಿಸಿದರೆ ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರೈತ ಸಂಘದ ರಾಜ್ಯ ಸಂಚಾಲಕ ಹನುಮಂತಪ್ಪ ದೀವಗಿಹಳ್ಳಿ, ಸಂಘದ ಹಿರೇಕೆರೂರ ತಾಲೂಕು ಅಧ್ಯಕ್ಷ ರವಿ ಮಾಳಗೇರ, ಸುರೇಶ ಯರಳ್ಳಿ, ಗುರುರಾಜ ಕಡೆಮನಿ, ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net