

ಶಿರಹಟ್ಟಿ: ಬಾಗಲಕೋಟೆ- ಹೊನ್ನಾಳಿ ರಾಜ್ಯ ಹೆದ್ದಾರಿ ನಿರ್ಮಾಣ ಸಮಯದಲ್ಲಿ ಖಾಸಗಿ ಸಿಮೆಂಟ್ ಕಂಪನಿಯ ವಾಹನಗಳ ಓಡಾಟದಿಂದ ಹಾಳಾಗಿರುವ ಗ್ರಾಮೀಣ ರಸ್ತೆಗಳ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಕುಂದು-ಕೊರತೆ ನಿವಾರಣೆ ಸಮಿತಿ ಉಪ ತಹಸೀಲ್ದಾರ್ ಎಸ್. ಪೂಜಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದೆ.
ಸಮಿತಿ ಅಧ್ಯಕ್ಷ ಅಕ್ಬರ್‌ಸಾಬ್ ಯಾದಗಿರಿ ಮಾತನಾಡಿ, ಪಟ್ಟಣ ಸಂಪರ್ಕಿಸುವ ಸೊರಟೂರ, ವರವಿ ಮತ್ತು ಛಬ್ಬಿ ಗ್ರಾಮಗಳಿಂದ ಬರುವ ರಸ್ತೆಗಳಲ್ಲಿ ಅಧಿಕ ಭಾರದ ಟಿಪ್ಪರ್ ಓಡಾಡಿ, ರಸ್ತೆಯ ಡಾಂಬರ್ ಕಿತ್ತು ಹೋಗಿದೆ. ಆರ್‌ಸಿಸಿ ಕಂಪನಿ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಬೇಕು ಎಂದರು. ಶ್ರೀನಿವಾಸ ಬಾರಬಾರ, ಶ್ರೀನಿವಾಸ ಕಪಟಕರ, ಜಗದೀಶ ತೇಲಿ, ಮಲ್ಲಿಕಾರ್ಜುನ ಕಬಾಡಿ, ವೀರಣ್ಣ ಅಂಗಡಿ, ಮುನ್ನಾ ಡಾಲಾಯತ್, ಸಿದ್ದಪ್ಪ ವಡ್ಡರ, ಜಾಕೀರ ಕೋಳಿವಾಡ, ಸಂಜೀವ ಹೆಸರೂರ ಇತರರಿದ್ದರು.