

ಚಿಕ್ಕಮಗಳೂರು: ನಗರದ ಅಭಿವೃದ್ಧಿ ದೃಷ್ಟಿಯಿಂದ ಚಿಕ್ಕಮಗಳೂರು ನಗರಸಭೆಗೆ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯರು ಮಂಗಳವಾರ ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ನಗರಸಭೆ ಸದಸ್ಯ ಮುನೀರ್ ಅಹ್ಮದ್, ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಅಮೃತ್ ಯೋಜನೆ ಅನುಷ್ಟಾನಗೊಂಡಿದೆ. ಆದರೂ ನಗರಕ್ಕೆ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಹೊಸದಾಗಿ ಜಾಕ್‌ವೆಲ್ ಮತ್ತು ನಗರದಲ್ಲಿ ನಾಲ್ಕು ಓವರ್‌ಹೆಡ್ ಟ್ಯಾಂಕ್ ಗಳ ಅವಶ್ಯಕತೆಯಿದೆ ಎಂದರು.
ನಗರದ ಹಳೆ ಒಳಚರಂಡಿ ಸಂಪರ್ಕಗಳು ಕುಸಿಯುತ್ತಿರುವುದರಿಂದ ಬದಲಾಯಿಸಿ ಹೊಸದಾಗಿ ಒಳಚರಂಡಿ ಸಂಪರ್ಕ ನಿರ್ಮಿಸಬೇಕು. ಈ ಬಾರಿ ಮಳೆಗಾಲ ಹೆಚ್ಚಾದ ಕಾರಣ ನಗರಸಭಾ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ ಹಾಗೂ ಚರಂಡಿಗಳು ಹದಗೆಟ್ಟಿದೆ ಎಂದು ತಿಳಿಸಿದರು.
ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳು ಇಲ್ಲದಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ತುರ್ತಾಗಿ ಬೀದಿ ದೀಪಗಳನ್ನು ಅಳವಡಿಸಬೇಕು. ಬೇಲೂರು ಯಗಚಿ ಜಲಾಶಯದಲ್ಲಿ ಹೊಸದಾಗಿ ಜಾಕ್‌ವೆ ಲ್ ನಿರ್ಮಿಸಬೇಕು. ಶ್ರೀನಿವಾಸನಗರ, ಹೌಸಿಂಗ್ ಬೋರ್ಡ್, ಉಂಡೇದಾಸರಹಳ್ಳಿ, ಓವರ್‌ಹೆಡ್ ಟ್ಯಾಂಕ್ ಗಳನ್ನು ನಿರ್ಮಿಸಬೇಕು ಹಾಗೂ ಕಲ್ಲುದೊಡ್ಡಿಯಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕಿದೆ. ಹೀಗಾಗಿ ನಗರಸಭೆಗೆ ಸೂಕ್ತ ಅನುದಾನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇ ಗೌಡ, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ನಗರಸಭಾ ಸದಸ್ಯರಾದ ಶಾದಬ್ ಆಲಂ ಖಾನ್, ಜಾವೀದ್, ಖಲಂಧರ್, ಲಕ್ಷö್ಮಣ್, ಸಿ.ಪಿ.ಲಕ್ಷö್ಮಣ್, ಇಂದಿರಾ, ಗುರುಮಲ್ಲಪ್ಪ, ಮಂಜುಳಾ ಲಕ್ಷö್ಮಣ್, ಪರಮೇಶ್ ರಾಜ್ ಅರಸ್, ನಾಮಿನಿ ಸದಸ್ಯರಾದ ಪ್ರಕಾಶ್ ರೈ, ಕೀರ್ತೀಶೆಟ್, ವಾಸೀಂ, ತಬ್ರೇಜ್, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಸದಸ್ಯ ಅನ್ಸರ್ ಆಲಿ ಮತ್ತಿತರರಿದ್ದರು.