

ಕಡೂರು: ತಾಲೂಕಿನ ಯಗಟಿ ಗ್ರಾಮದ ಊರ ಮುಂದಿನ ಕೆರೆಯನ್ನು ಮೀನುಗಾರಿಕೆ ಇಲಾಖೆಯಿಂದ ಟೆಂಡರ್ ಪಡೆದು ಹಣ ಪಾವತಿಸದ ಕಾರಣ ಟೆಂಡರ್ ನಿಂತುಹೋಗಿತ್ತು. ಗ್ರಾಮಸ್ಥರೇ ಗ್ರಾಮದೇವತೆಯ ಅಭಿವೃದ್ಧಿಗಾಗಿ ಹರಾಜು ನಡೆಸಿದ್ದು ಇಲಾಖೆ ಮರು ಟೆಂಡರ್ ಪ್ರಕ್ರಿಯೆ ನಡೆಸಬಾರದು ಎಂದು ಗ್ರಾಮಸ್ಥರು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ, ಗೋವಿಂದಪ್ಪ ಮಾತನಾಡಿ ಸರ್ಕಾರದ ಈ ಹಿಂದೆ ಆದೇಶದಂತೆ ಇ-ಟೆಂಡರ್ ನಡೆದಿತ್ತು. ಆದರೆ ಟೆಂಡರ್‌ದಾರ ಇಲಾಖೆಯ ಹಣ ಕಟ್ಟದ ಕಾರಣ ಟೆಂಡರ್ ನಿಂತುಹೋಗಿತ್ತು. ನಂತರ ಗ್ರಾಮಸ್ಥರು ಸಭೆ ಕರೆದು 9 ದೊಡ್ಡಿಗೌಡರ ಸಮ್ಮುಖದಲ್ಲಿ ಗ್ರಾಮದ ಗ್ರಾಮದೇವತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಹರಾಜು ಮಾಡಿದ್ದಾರೆ. ಇದಕ್ಕೆ ಟೆಂಡರ್ ಹಾಕಿದವರೆಲ್ಲರೂ ಒಪ್ಪಿಗೆ ನೀಡಿದ್ದಾರೆ. ನಡಾವಳಿ ಮಾಡಿ ಅವರಿಂದ ಹಣ ಕಟ್ಟಿಸಿಕೊಂಡಿದ್ದೇವೆ. ಆದರೆ ಸರ್ಕಾರ ಮರು ಟೆಂಡರ್ ಕರೆದಿದ್ದು ದುರುದ್ದೇಶದಿಂದ ಕೂಡಿದೆ ಎಂದು ದೂರಿದರು.
ಗ್ರಾಮಸ್ಥರು ಒಗ್ಗಟ್ಟಾಗಿ ಸಭೆ ಮಾಡಿ ನಿರ್ಣಯ ಕೈಗೊಂಡಿದ್ದು ಅಧಿಕಾರಿ ವರ್ಗದವರು ಮರು ಟೆಂಡರ್ ಕರೆದಿರುವುದನ್ನು ಕೂಡಲೇ ನಿಲ್ಲಿಸಿ ಗ್ರಾಮಸಭೆ ನಿರ್ಣಯಕ್ಕೆ ಒಪ್ಪಿಗೆ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಮುಖಂಡರಾದ ಮಂಜುನಾಥ್, ಕೃಷ್ಣಮೂರ್ತಿ, ಬಳ್ಳಾರಿ ಮಂಜಣ್ಣ, ಪರಮೇಶ್ವರಪ್ಪ, ಸತ್ಯನಾರಾಯಣ, ನಾಗರಾಜ್, ಗೋವಿಂದಪ್ಪ, ರಂಗನಾಥ್, ಪ್ರಕಾಶ್, ಮಲ್ಲಿಕಾರ್ಜುನ್, ವೀರೇಶ್, ರಮೇಶ್, ಚಂದ್ರು, ಮೋಹನ್, ಕಿರಣ್, ವೆಂಕಟೇಶ್ ಹಾಗೂ ಮೀನುಗಾರಿಕೆ ಸಹಕಾರ ಸಂಘದ ನಿರ್ದೇಶಕ ಕಂಸಾಗರ ರಘು ಇದ್ದರು.