ಸರ್ವೇ ಕಾರ್ಯ ಶೀಘ್ರ ಪೂರ್ಣ : ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಗೆ ಮನವಿ

manavi
Published on

ಬೆಳ್ತಂಗಡಿ: ತಾಲೂಕಿನ ಕಳೆಂಜ ಗ್ರಾಮದ ಸರ್ವೇ ನಂಬರ್ 309ರಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಸಲುವಾಗಿ ಜಮೀನಿನ ಜಂಟಿ ಸರ್ವೇ ಕಾರ್ಯ ಶೀಘ್ರವಾಗಿ ಪೂರ್ಣಗೊಳಿಸುವಂತೆ ಕೆ.ಎಸ್.ಎಂ.ಸಿ ಎ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರಿಗೆ ಮನವಿ ಸಲ್ಲಿಸಲಾಯಿತು.

ಕಳೆಂಜ ಗ್ರಾಮದ 309 ಸರ್ವೇ ನಂಬರ್‌ನಲ್ಲಿ ದಶಕಗಳಿಂದ ವಾಸಿಸುತ್ತಾ ಬಂದಿರುವ ಜನರು ಜಮೀನು ಹಕ್ಕುಪತ್ರ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿಂದೆ ಅಂದಿನ ಶಾಸಕ ವಸಂತ ಬಂಗೇರ ಕೆಲವು ಕುಟುಂಬಗಳಿಗೆ ಅಕ್ರಮ ಸಕ್ರಮ ಸಮಿತಿಯಲ್ಲಿ ಜಮೀನು ಮಂಜೂರು ಮಾಡಿದ್ದರೂ ಹಕ್ಕುಪತ್ರ ಲಭಿಸಿರಲಿಲ್ಲ. ಸರ್ವೇ ನಂಬರ್‌ನಲ್ಲಿ ಅರಣ್ಯ ಇಲಾಖೆ ಜಮೀನು ಹಾಗೂ ಕಂದಾಯ ಇಲಾಖೆ ಜಮೀನನ್ನು ಪ್ರತ್ಯೇಕಿಸದ ಕಾರಣದಿಂದಾಗಿ ಹಕ್ಕುಪತ್ರ ಪಡೆಯಲು ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 309 ಸರ್ವೇ ನಂಬರ್‌ನಲ್ಲಿ ಇರುವ ಜಮೀನಿನ ಜಂಟಿ ಸರ್ವೇ ಸಾಧ್ಯವಾದಷ್ಟು ವೇಗವಾಗಿ ಪೂರ್ಣಗೊಳಿಸಿ ಕೊಡುವಂತೆ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರೊಂದಿಗೆ ಮಾತುಕತೆ ನಡೆಸಿ ಅಗತ್ಯ ಕ್ರಮ ಕೈಗೊಂಡು ಹಕ್ಕುಪತ್ರ ಲಭಿಸಲು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆಯ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಅಧಿಕಾರಿಗಳು ಸಾಧ್ಯವಾದಷ್ಟು ವೇಗವಾಗಿ ಸರ್ವೇ ಕಾರ್ಯ ಆರಂಭಿಸುವುದಾಗಿ ತಿಳಿಸಿದ್ದಾರೆ.

ನಿಯೋಗದಲ್ಲಿ ಕೆ.ಎಸ್.ಎಂ.ಸಿ.ಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ, ಕೇಂದ್ರ ಸಮಿತಿ ಸದಸ್ಯ ಜಾರ್ಜ್, ಧರ್ಮಸ್ಥಳ ವಲಯ ಸಮಿತಿ ಅಧ್ಯಕ್ಷ ಜೈಸನ್ ಪಟ್ಟೇರಿ, ಮುಖಂಡ ಜೋಮೆಟ್ ಕಳೆಂಜ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net