

ಗೋಣಿಕೊಪ್ಪ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ನುರಿತ ವೈದ್ಯರ ಕೊರತೆ ನೀಗಿಸಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟವು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಆರ್.ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿತು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಸಮುದಾಯ ಅರೋಗ್ಯ ಕೇಂದ್ರ ಸಿದ್ದಾಪುರ ಅಭಿವೃದ್ಧಿ ಮತ್ತು ನುರಿತ ತಜ್ಞ ವೈದ್ಯರ ನೇಮಕ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪಿ.ಎ.ಹನೀಫಾ ಹಾಗೂ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ನಿವಾಸಕ್ಕೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರ ಸಮ್ಮುಖದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸಿದ್ಧಾಪುರ ಭಾಗದಲ್ಲಿ ಬಹುತೇಕ ಕೂಲಿ ಕಾರ್ಮಿಕರಿದ್ದು ಹೃದಯ ಮತ್ತು ಇನ್ನಿತರ ಗಂಭೀರ ಸ್ವರೂಪದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ದೂರದ ಊರುಗಳಿಗೆ ತೆರಳುವ ಪರಿಸ್ಥಿತಿಯಿದೆ. ಕಾರ್ಮಿಕರ ಮತ್ತು ಜನಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ಸಿದ್ಧಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತ ನಿಧಿ ಸ್ಥಾಪನೆ, ಸ್ತ್ರೀರೋಗ ತಜ್ಞರು ಹೃದಯ ಸಂಬಂಧಿ ತಜ್ಞ ವೈದ್ಯರು, ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳಿಗೆ ಉಚಿತ ಔಷಧಗಳನ್ನು ಪೂರೈಸುವುದು, ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆ ಉನ್ನತ್ತೀಕರಣ ಸೇರಿದಂತೆ ಆಸ್ಪತ್ರೆಯಲ್ಲಿ ಸಿ.ಟಿ. ಸ್ಕಾೃನ್ ಕೊರತೆಯಿಂದಾಗಿ ಹೊರ ಜಿಲ್ಲೆಗೆ ತೆರಳುವ ಪರಿಸ್ಥಿತಿ ಎದುರಾಗಿದ್ದು ಸಿ.ಟಿ. ಸ್ಕ್ಯಾನ್ ಯಂತ್ರ ಅಳವಡಿಸುವುದು, ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳ ಅಳವಡಿಕೆ, ರಕ್ತನಿಧಿ ಕೇಂದ್ರ ಸ್ಥಾಪನೆ, ಹೃದ್ರೋಗ ತಜ್ಞರು ಸೇರಿದಂತೆ ಇನ್ನಿತರ ನುರಿತ ವೈದ್ಯರ ನೇಮಕಾತಿ ಮಾಡುವಂತೆ ಮನವಿಯಲ್ಲಿ ಉಲ್ಲೇಖಿಸಿ, ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು ವೈದ್ಯರ ಕೊರತೆ ಹಾಗೂ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಶಾಸಕರು ಹಾಗೂ ವೈಧ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.
ಕೆಪಿಸಿಸಿ ಪ್ಯಾನಲಿಸ್ಟ್ ಅರ್.ಕೆ.ಸಲಾಂ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಬಾವ ಕೆ.ಎ., ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೊಳುಮಂಡ ರಫೀಕ್, ಜಿಲ್ಲಾ ಕಾರ್ಯದರ್ಶಿ ಜೋಕಿಂ ರೋಡ್ರಿಗಸ್ಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಜುಬೇರ್ ಸಿ.ಇ.ಮಹಮ್ಮದ್ ಕೆ.ಇ. ಶಾಫಿ ಎಡಪಾಲ, ವಿರಾಜಪೇಟೆ ಪುರಸಭೆಯ ಸದಸ್ಯರಾದ ಎಚ್.ಎಸ್.ಮತೀನ್, ಮೊಹಮ್ಮದ್ ರಫಿ ಮುಂತಾದವರು ಹಾಜರಿದ್ದರು.