

ಭಟ್ಕಳ: ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಾಹನ ಮಾಲಕ ಚಾಲಕ ಸಂಘ, ಮಿನಿ ಬಸ್ ಮತ್ತು ಟೆಂಪೊ ಟ್ರಾವೆಲರ್ನ ಸದಸ್ಯರು ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಹಾಗೂ ಪಿ.ಡಬ್ಲೂ. ಡಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಭಟ್ಕಳ ತಾಲೂಕಿನ ಸಾಗರ ರಸ್ತೆಯ ಎಡಭಾಗ ಹಾಗೂ ಬಲಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ನಮಗೆ ಮಿನಿ ಬಸ್ ಮತ್ತು ಟೆಂಪೊ ಪಾರ್ಕಿಂಗ್ ಮಾಡಲು ಅನಾನುಕೂಲತೆ ಉಂಟಾಗಿದೆ. ರಸ್ತೆಯ ಪಕ್ಕದಲ್ಲಿರುವಂತಹ ಕಲ್ಲುಗಳನ್ನು ತೆರವುಗೊಳಿಸಿ ಹಾಗೂ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ನಮಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬಸ್ ಮತ್ತು ಟೆಂಪೊ ಟ್ರಾವೆಲರ್ ಸಂಘದ ಉಪಾಧ್ಯಕ್ಷ ಚಂದ್ರು ನಾಯ್ಕ, ಕಳೆದ 25 ವರ್ಷಗಳಿಂದ ಸಾಗರ ರಸ್ತೆಯ ಸಮೀಪ ಟೆಂಪೋ ನಿಲ್ಲಿಸುತ್ತಿದ್ದೇವೆ. ಇತ್ತೀಚೆಗೆ ರಸ್ತೆ ವಿಸ್ತರಣೆ ಮಾಡುತ್ತಿರುವುದರಿಂದಾಗಿ ಟೆಂಪೋ ನಿಲ್ಲಿಸಲು ಸಮಸ್ಯೆಯಾಗುತ್ತಿದೆ. ನಾವು ಒಂದು ವರ್ಷಕ್ಕೆ 75 ಸಾವಿರ ಟ್ಯಾಕ್ಸ್ ತುಂಬುತ್ತಿದ್ದೇವೆ. ಆದರೂ ನಮಗೆ ಸರಿಯಾದ ನಿಲ್ದಾಣದ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಭಟ್ಕಳ ಪುರಸಭೆ ಮುಖ್ಯಾಧಿಕಾರಿಗೆ ಹಾಗೂ ಪಿ.ಡಬ್ಲೂ. ಡಿ ಅಧಿಕಾರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಶಿವರಾಜ ನಾಯ್ಕ, ಹೊನ್ನಯ್ಯ ದೇವಾಡಿಗ,ನಾಗೇಶ ನಾಯ್ಕ, ಯಶೋಧರ ನಾಯ್ಕ, ಹರೀಶ ಶೇಟ್, ಮಧುಸೂಧನ್ ಶೇರುಗಾರ, ಭಾಸ್ಕರ ನಾಯ್ಕ ಮಣ್ಕುಳಿ, ಗಣೇಶ ನಾಯ್ಕ, ಹಾಗೂ ಚಾಲಕರು ಉಪಸ್ಥಿತರಿದ್ದರು.