

ಮಂಡ್ಯ: ಹೈಕೋರ್ಟ್ ಆದೇಶ ಜಾರಿಗೊಳಿಸುವುದರ ಜತೆಗೆ ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ತಮಿಳು ಕಾಲನಿ ಸ್ಥಳವನ್ನು ವಶಕ್ಕೆ ಪಡೆಯುವಂತೆ ಆಗ್ರಹಿಸಿ ಸೋಮವಾರ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ಕೊಡಲಾಯಿತು. ಮಂಡ್ಯ ಮೆಡಿಕಲ್ ಕಾಲೇಜಿಗೆ ಸೇರಿದ ತಮಿಳು ಕಾಲನಿ ಸ್ಥಳವನ್ನು ವಶಕ್ಕೆ ಪಡೆಯುವಂತೆ ಹೈಕೋರ್ಟ್ ಆದೇಶ ನೀಡಿ ದಶಕವೇ ಉರುಳುತ್ತಿದೆ. ಸ್ಥಳಾವಕಾಶದ ಕೊರತೆಯಿಂದ ಮಿಮ್ಸ್‌ನಲ್ಲಿ ಯಾವುದೇ ಹೊಸ ಆರೋಗ್ಯ ವ್ಯವಸ್ಥೆಯ ವಿಸ್ತರಣೆ ಸಾಧ್ಯವಿಲ್ಲದಂತಾಗಿ ಕಾಂಕ್ರೀಟ್ ಕಾಡಾಗುತ್ತಿದೆ. ತಾಯಿ, ಮಕ್ಕಳ ಆಸ್ಪತ್ರೆಗೆ ಸ್ಥಳಾವಕಾಶವಾಗದೆ ಮಂಡ್ಯ ನಗರದಿಂದ ಎಂಟು ಕಿ.ಮೀ ದೂರದ ಬಿ.ಹೊಸೂರು ಗ್ರಾಮಕ್ಕೆ ವರ್ಗವಾಗಿದೆ. ಪಾರ್ಕಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಟದ ಮೈದಾನ, ಗಾಳಿ, ಬೆಳಕು ಇಲ್ಲದೆ ಮೆಡಿಕಲ್ ಕಾಲೇಜು ಕಿಷ್ಕಿಂಧೆಯಾಗುತ್ತಿದೆ ಎಂದರು.
ತಮಿಳು ಕಾಲನಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ ಆ ಪ್ರದೇಶವನ್ನು ಹೈಕೋರ್ಟ್ ನಿರ್ದೇಶನದಂತೆ ವಶಕ್ಕೆ ಪಡೆಯುವಲ್ಲಿ ಜಿಲ್ಲಾಡಳಿತಕ್ಕೆ ಅಗತ್ಯ ಇಚ್ಛಾಶಕ್ತಿ ಇಲ್ಲವಾಗಿರುವುದು ದುರಂತ. ಟ್ರಾಮಾಕೇರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ಆರೋಗ್ಯ ವ್ಯವಸ್ಥೆಯ ವಿಸ್ತರಣೆಗಾಗಿ ತಮಿಳು ಕಾಲನಿ ಸ್ಥಳವನ್ನು ವಶಕ್ಕೆ ಪಡೆಯುವುದು ಜರೂರಾಗಿದೆ. ಜಿಲ್ಲೆಯ ಸುಮಾರು 23 ಲಕ್ಷ ಜನರ ಆರೋಗ್ಯ ಸೇವೆಗಾಗಿ ಪ್ರದೇಶವನ್ನು ವಶಕ್ಕೆ ಪಡೆಯಲು ಜಿಲ್ಲಾಡಳಿತ ಸಮರ್ಥ ಕ್ರಮ ಅನುಸರಿಬೇಕು. ಅಲ್ಲಿನ ನಿವಾಸಿಗಳಿಗೆ ಮಂಡ್ಯ ಕೆರೆಯಂಗಳದಲ್ಲಿ ನಿರ್ಮಿಸಿರುವ ಮನೆಗಳಿಗೆ ಸ್ಥಳಾಂತರಿಸಲು ಕಾಲಮಿತಿಯೊಳಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಡಿಸಿ, ಶೀಘ್ರವಾಗಿ ಜಿಲ್ಲಾಡಳಿತ ಸಭೆ ಆಯೋಜಿಸಿ ಸಮಸ್ಯೆ ಇತ್ಯರ್ಥಗೊಳಿಸಲಾಗುವುದು. ಹೈಕೋರ್ಟ್ ಆದೇಶ ಪಾಲನೆಗೆ ಜಿಲ್ಲಾಡಳಿತ ಬದ್ದವಾಗಿದೆ. ಜಿಲ್ಲೆಯ ಜನರ ಆರೋಗ್ಯ ಸೇವೆಯ ವಿಸ್ತರಣೆ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕರುನಾಡ ಸೇವಕರು ಸಂಘದ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ. ಮಂಡ್ಯ ನಗರಾಧ್ಯಕ್ಷ ಎಂ.ಎನ್.ಚಂದ್ರು, ಬಜರಂಗಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಇತರರಿದ್ದರು.