

ಚಿಕ್ಕಮಗಳೂರು: ಶ್ರೀರಾಮ ಸೇನೆಯಿಂದ ನ. 4ರಿಂದ ಏಳು ದಿನಗಳ ಕಾಲ ನಡೆಯುವ ದತ್ತಮಾಲಾ ಅಭಿಯಾನಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಮಂಗಳವಾರ ಎಸ್ಪಿ ವಿಕ್ರಮ ಅಮಟೆ ಅವರಿಗೆ ಮನವಿ ಸಲ್ಲಿಸಿದರು.
ದತ್ತಮಾಲಾ ಅಭಿಯಾನದಲ್ಲಿ ನಾಡಿನ ಪ್ರಮುಖ ಸಾಧು ಸಂತರು, ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಮುಖಂಡರು ದತ್ತಾತ್ರೇಯ ಪೀಠಕ್ಕೆ ತೆರಳಿ ದತ್ತ ಪಾದುಕೆಗಳ ದರ್ಶನ ಪಡೆಯಲಿದ್ದಾರೆ. ಬಳಿಕ ದತ್ತಪೀಠದಲ್ಲಿ ಶ್ರೀ ಗುರು ದತ್ತಾತ್ರೇಯ ಹೋಮ, ಪೂಜೆ ಹಾಗೂ ಸಾಧುಸಂತರ ಸಾನಿಧ್ಯದಲ್ಲಿ ಧಾರ್ಮಿಕ ಸಭೆ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಅನುಮತಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ದತ್ತಪೀಠದಲ್ಲಿ ಇಸ್ಲಾಂನ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ದತ್ತಪೀಠದ ಪವಿತ್ರತೆಗೆ ಧಕ್ಕೆ ತರುವ ಗೋರಿಗಳನ್ನು ಕೂಡಲೇ ಅಲ್ಲಿಂದ ಸ್ಥಳಾಂತರಿಸಬೇಕು. ದತ್ತಪೀಠದಲ್ಲಿ ವಿಗ್ರಹವನ್ನು ಕೂಡಲೇ ಪ್ರತಿಷ್ಠಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ದತ್ತಪೀಠದಲ್ಲಿದ್ದ ಅಮೂಲ್ಯ ವಿಗ್ರಹಗಳು ಹಾಗೂ ಕಾಣಿಕೆ ವಸ್ತುಗಳು ಕಾಣೆಯಾಗಿರುವುದು, ಆಸ್ತಿ ಅಕ್ರಮ ಹಸ್ತಾಂತರ ಹಾಗೂ ಮಾರಾಟವಾಗಿದ್ದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ದತ್ತಪೀಠ ಪರಿಸರದಲ್ಲಿ ಮಾಂಸಹಾರ ಸಂಪೂರ್ಣ ನಿಷೇಧಿಸಬೇಕು. ಪೀಠದಲ್ಲಿ ಕಂಡು ಬರುವ ಉರ್ದು ನಾಮಫಲಕಗಳನ್ನು ಕೂಡಲೇ ತೆರವುಗೊಳಿಸಬೇಕು. ಪೀಠಕ್ಕೆ ಬರುವ ಸ್ವಾಮೀಜಿಗಳು ಹಾಗೂ ಸಾಧುಸಂತರಿಗೆ ಪೂಜೆ ಮಾಡಲು ಮುಕ್ತ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಶ್ರೀ ರಾಮ ಸೇನೆ ಮುಖಂಡರಾದ ರಂಜಿತ್ ಶೆಟ್ಟಿ, ಯೋಗೀಶ್ ಸಂಜಿತ್ ಸುವರ್ಣ, ರಾಜೇಂದ್ರ ಕುಮಾರ್, ಅಭಿಜಿತ್ ಗೌಡ, ನವೀನಾ ರಂಜಿತ್ ಮತ್ತಿತರರಿದ್ದರು.