ಅಂಚೆ ಕಚೇರಿಯಲ್ಲಿ ಕಾಯಂ ಸಿಬ್ಬಂದಿ ನಿಯೋಜನೆಗೆ ಮನವಿ

06 GJD- 2
ಗಜೇಂದ್ರಗಡ ಪಟ್ಟಣದ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ಕಾಯಂ ಸಿಬ್ಬಂದಿಯನ್ನು ನಿಯೋಜಿಸುವಂತೆ ಆಗ್ರಹಿಸಿ ಬುಧವಾರ ಅಂಚೆ ಕಚೇರಿ ಎದುರು ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on

ಗಜೇಂದ್ರಗಡ: ಪಟ್ಟಣದ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗೆ ಕಾಯಂ ಸಿಬ್ಬಂದಿಯನ್ನು ನಿಯೋಜಿಸುವಂತೆ ಬುಧವಾರ ಇಲ್ಲಿನ ಅಂಚೆ ಕಚೇರಿ ಎದುರು ‘ನಮ್ಮ ಕರ್ನಾಟಕ ಸೇನೆ’ಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸರ್ಕಾರಿ ಸೌಲಭ್ಯ ಸೇರಿ ಇತರ ನೋಂದಣಿ ವೇಳೆಯಲ್ಲಿ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಆದರೆ, ಪಟ್ಟಣದ ಎಪಿಎಂಸಿ ಆವರಣದಲ್ಲಿನ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ಸಿಬ್ಬಂದಿಯ ಕೊರತೆಯಿದೆ. ಆಧಾರ್ ತಿದ್ದುಪಡಿ ಕಾರ್ಯವು ಕೆಲ ದಿನಗಳಿಂದ ಸ್ಥಗಿತಗೊಂಡಿದೆ. ಇದರಿಂದ ನಿವಾಸಿಗಳು ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ವೃದ್ಧಾಪ್ಯ ವೇತನ, ಅಂಗವಿಕಲ, ಗೃಹಜ್ಯೋತಿ ಸೇರಿ ಇತರ ಸೌಲಭ್ಯಗಳನ್ನು ಪಡೆಯಲು ಅಧಾರ್ ಸಂಖ್ಯೆ ಅವಶ್ಯವಾಗಿದೆ. ಆದರೆ ತಿದ್ದುಪಡಿ ಕೇಂದ್ರದಲ್ಲಿ ಆಪರೇಟರ್ ಸಿಬ್ಬಂದಿ ಇಲ್ಲದ ಪರಿಣಾಮ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಜನತೆ ನಿತ್ಯವೂ ಅಂಚೆ ಕಚೇರಿಗೆ ಅಲೆಯಬೇಕಾಗಿದೆ. ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಕಾಯಂ ಸಿಬ್ಬಂದಿಯ ನೇಮಕ ಮಾಡಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಭೀಮಣ್ಣ ಇಂಗಳೆ, ಆಂಜನೇಯ ಮುತ್ತಗಾರ, ಶರಣಪ್ಪ ಚವ್ಹಾಣ, ಮುತ್ತಣ್ಣ ರೇಣಿ, ನಾಗಪ್ಪ ಯಲಬುಣಚಿ, ಷಣ್ಮುಖ ಕಾತರಕಿ, ಸಂಗಪ್ಪ ಪಂತಗರಾಯ, ಜಗದೀಶ ಮಡಿವಾಳರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net