

ಚಿತ್ರದುರ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ವಿರುದ್ಧ ಸುಳ್ಳು ಆರೋಪ, ಅಪಪ್ರಚಾರದಲ್ಲಿ ನಿರತರಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಜಿಲ್ಲಾ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.
ನೌಕರರ ಪರವಾಗಿ ಹಲವು ಉತ್ತಮ ಕಾರ‌್ಯಗಳನ್ನು ಕೈಗೊಳ್ಳುವ ಮೂಲಕ ರಾಷ್ಟ್ರದಲ್ಲೇ ಮಾದರಿಯಾಗಿರುವ ನಮ್ಮ ಈ ಸಂಘವನ್ನು ದುರ್ಬಲಗೊಳಿಸಲು ಸಂಘಟನೆ ವಿರೋಧಿಗಳು ಹುನ್ನಾರು ನಡೆಸಿದ್ದಾರೆ ಎಂದು ದೂರಿದರು.
ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿರುವುದಲ್ಲದೆ, ದೂರಿನ ಪ್ರತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಂಘಟನೆ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿರುತ್ತಾರೆ.
ನೌಕರರ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಾಜ್ಯ ಸಂಘದ ಅಧ್ಯಕ್ಷರ ಸಹಿತ ವಿವಿಧ ಪದಾಧಿಕಾರಿಗಳ ವಿರುದ್ಧ ನಕಲಿ ದಾಖಲೆಗಳೊಂದಿಗೆ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಕಾರ‌್ಯದರ್ಶಿ ಎಸ್.ಕೆ.ಮಂಜುನಾಥ್, ಬಾಗೇಶ್ ಉಗ್ರಾಣ, ಸಿದ್ದೇಶ್ವರ್, ಎಸ್.ವೀರಣ್ಣ, ಶ್ರೀನಿವಾಸ್, ಬಿ.ಆರ್.ತಿಪ್ಪೇಸ್ವಾಮಿ, ಚಂದ್ರನಾಯ್ಕ, ಗಂಗಣ್ಣ ಮತ್ತಿತರರು ಇದ್ದರು.