ವಿವಿಧ ಬೇಡಿಕೆ ಈಡೇರಿಕೆಗೆ ಮನವಿ

ವಿವಿಧ ಬೇಡಿಕೆ ಈಡೇರಿಕೆಗೆ ಮನವಿ
Published on

ಸುಂಟಿಕೊಪ್ಪ: ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರತ್ಯೇಕ ಕುಡಿಯುವ ನೀರಿನ ಟ್ಯಾಂಕ್, ಕೊಡಗರಹಳ್ಳಿ ಜಂಕ್ಷನ್‌ನಲ್ಲಿ ಅಡ್ಡಾದಿಡ್ಡಿ ವಾಹನಗಳ ನಿಲುಗಡೆ, ಶಾಲೆಯಲ್ಲಿ ಶೌಚಗೃಹ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳು ಕೊಡಗರಹಳ್ಳಿ ಗ್ರಾಮಪಂಚಾಯಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಕೇಳಿಬಂದವು.

ಗ್ರಾ.ಪಂ. ಅಧ್ಯಕ್ಷೆ ನಿರತಾ ಬೆಳ್ಳಿಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಸುಂಟಿಕೊಪ್ಪ ನಾಡು ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿ ಮಾತನಾಡಿ, ತಮ್ಮ ಶಾಲೆಗೆ ಶೌಚಗೃಹದ ಅಗತ್ಯತೆಯಿದ್ದು, ತುರ್ತಾಗಿ ಶೌಚಗೃಹ ಮಾಡಿಕೊಡುವಂತೆ ಮನವಿ ಮಾಡಿದರು.

ಗ್ರಾ.ಪಂ. ಪಿಡಿಒ ರವೀಶ್ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಶೌಚಗೃಹ ನಿರ್ಮಿಸಲು ಅವಕಾಶವಿದೆ. ಆದರೆ, ಅನುದಾನಿತ ಶಾಲೆಗಳಲ್ಲಿ ನಿರ್ಮಾಣಕ್ಕೆ ಅವಕಾಶವಿಲ್ಲ. ಈ ಬಗ್ಗೆ ತುರ್ತಾಗಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದರು.
ಕೊಡಗರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮಾತನಾಡಿ, ನಮ್ಮ ಶಾಲೆಯಲ್ಲಿ ಸೂಕ್ತ ನೀರಿನ ಟ್ಯಾಂಕ್ ವ್ಯವಸ್ಥೆ ಇಲ್ಲ. ಈ ಬಗ್ಗೆ ಗ್ರಾ.ಪಂ. ವತಿಯಿಂದ ಕ್ರಮವಹಿಸುವಂತೆ ಕೋರಿದರು. ಗ್ರಾ.ಪಂ. ಅಧ್ಯಕ್ಷೆ ನಿರತಾ ಬೆಳ್ಳಿಯಪ್ಪ ಮಾತನಾಡಿ, ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಕ್ರಮ ವಹಿಸುವುದಾಗಿ ಹೇಳಿದರು.

ಶಾಂತಿನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿನಿ ಮಾತನಾಡಿ, ಕೊಡಗರಹಳ್ಳಿ ಜಂಕ್ಷನ್‌ನಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಇದರಿಂದ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಸಂಬಂಧಿಸಿದವರು ಗಮನಹರಿಸಬೇಕು ಎಂದು ಕೋರಿದರು. ಗ್ರಾ.ಪಂ. ಅಧ್ಯಕ್ಷರು ಪ್ರತಿಕ್ರಿಯಿಸಿ, ಈ ಬಗ್ಗೆ ಹಲವು ದೂರುಗಳು ಬಂದಿದ್ದು, ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನವೀನ್ ಮಾತನಾಡಿ, ಮಕ್ಕಳ ಹಕ್ಕುಗಳು ಮತ್ತು ಗ್ರಾಮಸಭೆಯ ಮಹತ್ವದ ಬಗ್ಗೆ ತಿಳಿಸಿದರು. ಸುಂಟಿಕೊಪ್ಪ ಠಾಣೆಯ ಎಎಸ್‌ಐ ಸೈಮನ್ ಡಿ.ಕುನ್ನಾ ಸಂಚಾರ ನಿಯಮಗಳು, ಮಕ್ಕಳ ರಕ್ಷಣಾ ವಿಷಯಗಳ ಬಗ್ಗೆ ತಿಳಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜ್ಯೋತಿ, ಆರೋಗ್ಯ ನಿರ್ವಹಣೆ, ವೈಯಕ್ತಿಕ ಶುಚಿತ್ವ ವಿಷಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಜಿಲ್ಲಾ ಐಇಸಿ ಸಂಯೋಜಕ ಪವನ್ ಕುಮಾರ್ ಮಕ್ಕಳ ಜ್ಞಾನ ವೃದ್ಧಿಯಲ್ಲಿ ಮಾಧ್ಯಮದ ಪಾತ್ರ ವಿಷಯದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.

ಬಾಲ ವಿಜ್ಞಾನಿಗೆ ಸನ್ಮಾನ: ಸುಂಟಿಕೊಪ್ಪನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಷಾ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಕಲುಷಿತಗೊಳಿಸುತ್ತಿರುವ ಕಾವೇರಿ ನದಿ ಈ ವಿಷಯದ ಬಗ್ಗೆ ಪ್ರಬಂಧ ಮಂಡನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ವಿದ್ಯಾರ್ಥಿನಿಗೆ ಗ್ರಾ.ಪಂ.ವತಿಯಿಂದ ಗೌರವಿಸಲಾಯಿತು.

ಗ್ರಾ.ಪಂ.ಸದಸ್ಯೆ ನೀತಾ, ಕವಿತಾ, ಕಲಾಮಣಿ, ಚೆನ್ನಬಸವಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದಮಯಂತಿ, ಶಾಂತಿನಿಕೇತನ ಶಾಲೆಯ ಮುಖ್ಯಶಿಕ್ಷಕಿ ಮೇರಿ ಫಾಟಿಮಾ, ಗ್ರಾ.ಪಂ.ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net