

ವಿಜಯವಾಣಿ ಸುದ್ದಿಜಾಲ ಹಾಸನ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಸರಣಿ ಪ್ರತಿಭಟನೆ ನಡೆದವು.
ಬಂಗಾರಪೇಟೆ ತಹಸೀಲ್ದಾರ್ ಕೊಲೆ ಖಂಡಿಸಿ, ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ, ವಿಶೇಷ ಪ್ಯಾಕೇಜ್‌ಗೆ 65 ವಯೋಮಿತಿ ಮೀರಿದ ಕ್ಷೌರಿಕರನ್ನು ಪರಿಗಣಿಸಬೇಕೆಂದು ಆಗ್ರಹಿಸಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಾಪಸ್‌ಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಸೌಲಭ್ಯ ಕಲ್ಪಿಸಲು ಆಗ್ರಹ: ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕೆಂದು ದಲಿತ ಸಂಘಟನೆಗಳ ಜಂಟಿ ವೇದಿಕೆ ಪದಾಧಿಕಾರಿಗಳು ಆಗ್ರಹಿಸಿದರು.
ವೇದಿಕೆ ರಾಜ್ಯ ಸಂಚಾಲಕ ಎಂ.ಸೋಮಶೇಖರ್, ಮುಖಂಡರಾದ ಕೆ. ಈರಪ್ಪ, ಎಚ್.ಕೆ. ಸಂದೇಶ್, ಜಿ.ಓ.ಮಹಾಂತಪ್ಪ, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್.ವಿಜಯಕುಮಾರ್, ನಾಗರಾಜ್ ಹೆತ್ತೂರು ಹಾಗೂ ಇತರರಿದ್ದರು.
ರೈತ ಸಂಘದಿಂದ ಪ್ರತಿಭಟನೆ:
ಕರೊನಾ ಲಾಕ್‌ಡೌನ್‌ನಂತಹ ಸಂದಿಗ್ಧ ಸಂದರ್ಭದಲ್ಲಿ ಟ್ರಾೃಕ್ಟರ್ ಖರೀದಿಗೆ ಪಡೆದಿದ್ದ ಸಾಲ ತೀರಿಸಿಲ್ಲ ಎಂಬ ಕಾರಣಕ್ಕೆ ಎಲ್ ಆ್ಯಂಡ್ ಟಿ ಫೈನಾನ್ಸಿಯರ್ ಕಂಪನಿ ವಾಹನ ಸೀಜ್ ಮಾಡಿದೆ ಎಂದು ಆರೋಪಿಸಿ ಕಚೇರಿ ಎದುರು ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಪ್ರತಿಭಟನೆ ನಡೆಸಿದರು.
ಶಾಂತಿಗ್ರಾಮ ಹೋಬಳಿ ಅದ್ದಿಹಳ್ಳಿ ಗ್ರಾಮದ ಎಚ್.ಆರ್.ದೀಪಕ್ ಅವರು ಸ್ವರಾಜ್ ಕಂಪನಿಯ 7,50,000 ರೂ. ಮೊತ್ತದ ಟ್ರ್ಯಾಕ್ಟರ್ ಖರೀದಿಗೆ ಎಲ್ ಆ್ಯಂಡ್ ಟಿ ಫೈನಾನ್ಸ್‌ನಲ್ಲಿ 5.10 ಲಕ್ಷ ರೂ. ಸಾಲ ಪಡೆದಿದ್ದರು. ಇದುವರೆಗೆ 74 ಸಾವಿರ ರೂ. ಪಾವತಿಸಿದ್ದಾರೆ. ಲಾಕ್‌ಡೌನ್‌ನಿಂದ ದುಡಿಮೆಯಿಲ್ಲದೆ ಸಾಲ ಪಾವತಿಗೆ ಅಡಚಣೆಯಾಗಿದೆ. ಇಂತಹ ದಿನಗಳಲ್ಲೂ ಫೈನಾನ್ಸ್‌ನವರು ಒತ್ತಡ ಹೇರುತ್ತಿರುವುದು ಖಂಡನೀಯ. ಜಿಲ್ಲಾಡಳಿತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಮೆಹಬೂಬ್ ಪಾಷಾ, ಲತಾ, ಮೀಸೆ ಮಂಜಣ್ಣ ಹಾಜರಿದ್ದರು.
ಕ್ಷೌರಿಕರಿಗೆ ಅನ್ಯಾಯ: ಕ್ಷೌರಿಕರಿಗೆ ನೀಡುತ್ತಿರುವ 5 ಸಾವಿರ ರೂ. ಪರಿಹಾರ ಯೋಜನೆಯಿಂದ 65 ವರ್ಷಕ್ಕಿಂತ ಹೆಚ್ಚಿನವರನ್ನು ಕಡೆಗಣಿಸಿದ್ದು ಸರ್ಕಾರ ಅನ್ಯಾಯ ಎಸಗಿದೆ ಎಂದು ಆಗ್ರಹಿಸಿ ಸವಿತಾ ಸಮಾಜ ಜಿಲ್ಲಾ ಪದಾಧಿಕಾರಿಗಳು ಮೌನ ಪ್ರತಿಭಟನೆ ನಡೆಸಿದರು.
ಸರ್ಕಾರ ಕ್ಷೌರಿಕರಿಗೆ ಘೋಷಿಸಿರುವ ಸಹಾಯಧನ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ 65 ವರ್ಷ ವಯಸ್ಸಿನ ಒಳಗಿರುವವರು ಮಾತ್ರ ಈ ಯೋಜನೆಯ ಲಾಭ ಪಡೆಯಲು ಸಾಧ್ಯ ಎಂದು ಗೊತ್ತಾಗಿದೆ. ಇದರಿಂದ ಸಾಕಷ್ಟು ಜನರಿಗೆ ಅನ್ಯಾಯ ಆಗಲಿದೆ. 65 ವರ್ಷಕ್ಕಿಂತ ಮೇಲ್ಪಟ್ಟವರೂ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕ್ಷೌರಿಕ ವೃತ್ತಿ ಮಾಡಿಕೊಂಡಿದ್ದಾರೆ. ಆದರೆ ಯೋಜನೆಯಿಂದ ಅಂತವರನ್ನು ಕಡೆಗಣಿಸಿದ್ದು ಖಂಡನೀಯ ಎಂದರು.
ಸವಿತಾ ಸಮಾಜ ಜಿಲ್ಲಾಧ್ಯಕ್ಷ ರವಿ ಕುಮಾರ್ ಹಾಗೂ ಇತರರು ಇದ್ದರು.
ಸಲಕರಣೆ ಖರೀದಿಯಲ್ಲಿ ಅವ್ಯವಹಾರ:
ಕರೊನಾ ಚಿಕಿತ್ಸಾ ಪರಿಕರಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರೊನಾ ಸೋಂಕಿನಿಂದ ರಾಜ್ಯ ತತ್ತರಿಸಿದೆ. ಒಂದು ಹೊತ್ತಿನ ಊಟಕ್ಕೂ ಅನ್ನವಿಲ್ಲದೆ ಸಾವಿರಾರು ಕುಟುಂಬಗಳು ಪರದಾಡುತ್ತಿವೆ. ಇಂತಹ ಸಂದಿಗ್ಧ ದಿನಗಳಲ್ಲಿ ಕೆಲ ಸಚಿವರು ಹಾಗೂ ಮೇಲ್ಮಟ್ಟದ ಅಧಿಕಾರಿಗಳು ಕೋಟ್ಯಂತರ ರೂ. ಕೊಳ್ಳೆ ಹೊಡೆದಿರುವ ಅನುಮಾನ ವ್ಯಕ್ತವಾಗಿದೆ.
ಪ್ರಕರಣದ ಕುರಿತು ಸೂಕ್ಷ್ಮ ತನಿಖೆಗೆ ಆಗ್ರಹಿಸಿ ಸಂಬಂಧಪಟ್ಟ ಸಚಿವರು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಎಐವೈಎಫ್ ರಾಜ್ಯ ಸಮಿತಿ ಜಿಲ್ಲಾಧ್ಯಕ್ಷ ಎಲ್.ಬಿ.ಗಿರೀಶ್, ಜಿಲ್ಲಾ ಕಾರ್ಯದರ್ಶಿ ಯೂನೂಸ್ ಖಾನ್ ಇತರರಿದ್ದರು.
ತಹಸೀಲ್ದಾರ್ ಹತ್ಯೆಗೆ ಖಂಡನೆ: ಕೋಲಾರ ಜಿಲ್ಲೆ ಬಂಗಾರಪೇಟೆ ತಹಸೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಯಾರದೋ ವಿವಾದದಲ್ಲಿ ಸಂಧಾನಕಾರರಾಗಿ ತಹಸೀಲ್ದಾರ್ ದಾರುಣ ಸಾವಿಗೀಡಾಗಿದ್ದಾರೆ. ಕಂದಾಯ, ಭೂಮಾಪನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರೋಗ್ಯ ಇಲಾಖೆಯಲ್ಲಿ ಈ ರೀತಿಯ ಹಲ್ಲೆ, ದೌರ್ಜನ್ಯ ಪ್ರಕರಣಗಳು ಮರುಕಳಿಸುತ್ತಿವೆ. ಚಂದ್ರಮೌಳೇಶ್ವರ ಅವರನ್ನು ಕೊಲೆಗೈದ ವ್ಯಕ್ತಿಗೆ ಶಿಕ್ಷೆಯಾಗಬೇಕು ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ಗೌರವಾಧ್ಯಕ್ಷ ಬಿ.ಕೆ.ರುದ್ರಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಎಸ್.ಶಿವಸ್ವಾಮಿ, ಖಜಾಂಚಿ ಪಿ.ಎಚ್.ಲಿಂಗರಾಜು, ಎನ್.ಪ್ರದೀಪ್ ಕುಮಾರ್ ಇದ್ದರು.
ಗೌರವಧನ ಹೆಚ್ಚಳಕ್ಕೆ ಆಗ್ರಹ: ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಮತ್ತು ಗೌರವಧನ ಸೇರಿಸಿ ಮಾಸಿಕ 12 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ.ಸತೀಶ್ ಕುಮಾರ್ ಅವರಿಗೆ ಶುಕ್ರವಾರ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು.
ಕರೊನಾ ಆರಂಭವಾದ ದಿನದಿಂದಲೂ ಭಾನುವಾರ ಸೇರಿದಂತೆ ಹಬ್ಬ ಹರಿದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸಿದ್ದೇವೆ. ಆದರೆ ದುಡಿಮೆಗೆ ತಕ್ಕ ಗೌರವ ಸರ್ಕಾರದಿಂದ ಸಿಕ್ಕಿಲ್ಲ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಟಿ.ಮಮತಾ, ಕಾರ್ಯದರ್ಶಿ ಸವಿತಾ, ರೂಪಾ, ಸರೋಜಾ, ಸುಧಾ, ಸೌಮ್ಯೌ, ಭುವನೇಶ್ವರಿ, ವಿಜಯಲಕ್ಷ್ಮೀ, ಆಶಾ, ಮಂಜುಳಾ ಹಾಗೂ ಇತರರಿದ್ದರು.