

ಸೋಮವಾರಪೇಟೆ: ರೈತ ಹೋರಾಟ ಸಮಿತಿಯಿಂದ ಸಿ ಆ್ಯಂಡ್ ಡಿ ಜಾಗದ ವಿಚಾರದಲ್ಲಿನ ದೋಷ ಸರಿಪಡಿಸುವಂತೆ ಶಾಸಕ ಡಾ.ಮಂತರ್‌ಗೌಡ ನೇತೃತ್ವದಲ್ಲಿ ಕರ್ನಾಟಕ ಅಡ್ವೊಕೇಟ್ ಜನರಲ್ ಸಿ.ಕೆ.ಶಶಿಕಿರಣ್ ಶೆಟ್ಟಿ ಅವರನ್ನು ಬೆಂಗಳೂರಿನ ಹೈಕೋರ್ಟ್ ಕಚೇರಿಯಲ್ಲಿ ಇತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯಲ್ಲಿ ಅತೀ ಹೆಚ್ಚಿನ ರೈತರು ಕಳೆದ 5 ದಶಕಗಳಿಂದ ಒತ್ತುವರಿ ಸಿ ಆ್ಯಂಡ್ ಡಿ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಹಿಂದೆ ಕಂದಾಯ ಇಲಾಖಾಧಿಕಾರಿಗಳ ಅವೈಜ್ಞಾನಿಕ ಮಾಹಿತಿಯಿಂದ ಸಿ ಆ್ಯಂಡ್ ಡಿ ಕೃಷಿಗೆ ಯೋಗ್ಯವಲ್ಲದ ಭೂಮಿ ಎಂದು ದಾಖಲಾಗಿರುವುದರಿಂದ ಸಮಸ್ಯೆಯಾಗಿದೆ. ಸಿ ಆ್ಯಂಡ್ ಡಿ ಭೂಮಿಯಲ್ಲಿ ಕೃಷಿ ಬೆಳೆಗಳನ್ನು ಬೆಳೆಯುತ್ತಿರುವುದರಿಂದ ಕೃಷಿಗೆ ಯೋಗ್ಯವಾದ ಭೂಮಿ ಎಂದು ಪರಿಗಣಿಸಿ, ರೈತರಿಗೆ ದಾಖಲಾತಿ ಮಾಡಿಕೊಡುವ ವ್ಯವಸ್ಥೆಯಾಗಬೇಕು. ಈಗ ಸೆಕ್ಷನ್-4 ಸರ್ವೇ ಪ್ರಾರಂಭವಾಗಿದೆ. ರೈತರಿಗೆ ತೊಂದರೆಯಾಗದಂತೆ ತಾವುಗಳು ಸರ್ಕಾರದ ಗಮನಕ್ಕೆ ತರಬೇಕು ಎಂದು ಶಾಸಕರು ಸಮಸ್ಯೆ ವಿವರಿಸಿದರು.
ಸಿ ಆ್ಯಂಡ್ ಡಿ ಭೂಮಿಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಶಶಿಕಿರಣ್ ಶೆಟ್ಟಿ ಭರವಸೆ ನೀಡಿದರು. ಕೊಡಗಿನಲ್ಲಿರುವ ರೈತರ ಸಂಖ್ಯೆ ಮತ್ತು ಸಿ ಆ್ಯಂಡ್ ಡಿ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಕುಟುಂಬಗಳ ವಿವರವನ್ನು ಸೇರಿದಂತೆ ಕೆಲ ದಾಖಲಾತಿಗಳನ್ನು ನೀಡುವಂತೆ ಸಮಿತಿಯ ಪದಾಧಿಕಾರಿಗಳಿಗೆ ತಿಳಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾಹಿತಿ ನೀಡಿ, ಜಿಲ್ಲೆಯಲ್ಲಿರುವ ಸಿ ಆ್ಯಂಡ್ ಡಿ ಭೂಮಿಯನ್ನು ಸರ್ಕಾರ, ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ಮಾಡಿಸಿ, ರೈತರಿಗೆ ದಾಖಲಾತಿ ಮಾಡಿಸಿಕೊಟ್ಟರೆ ಕೊಡಗಿನಲ್ಲಿ 50 ರಿಂದ 60 ಸಾವಿರ ರೈತರಿಗೆ ಉಪಯೋಗವಾಗಲಿದೆ ಎಂದು ಹೇಳಿದರು. ಹೋರಾಟ ಸಮಿತಿಯ ಪ್ರಸಿ ಗೌಡಳ್ಳಿ, ದಿವಾಕರ್ ಕೂತಿ, ಮಿಥುನ್ ಹರಗ ಇದ್ದರು.