ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಾಣಕ್ಕೆ ಮನವಿ

Published on

ಕುಂದಾಪುರ: ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಾಣ ಹಾಗೂ ಶಿಥಿಲವಾಗಿರುವ ಅರಾಟೆ ಸೇತುವೆ ಪುನರ್ ನಿರ್ಮಾಣ ಸಹಿತ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮನವಿ ಮಾಡಿದರು.

ದೆಹಲಿಯಲ್ಲಿ ಮಂಗಳವಾರ ಸಚಿವರನ್ನು ಭೇಟಿ ಮಾಡಿದ ಸಂಸದರು, ಗಂಗೊಳ್ಳಿ-ಕುಂದಾಪುರ ಸೇತುವೆ ಬೇಡಿಕೆ ಬಹುಕಾಲದ ಬೇಡಿಕೆಯಾಗಿದೆ. ಗಂಗೊಳ್ಳಿಯಿಂದ ಕುಂದಾಪುರ ಕೂಗಳತೆ ಇದ್ದರೂ ಸೇತುವೆ ಇಲ್ಲದಿರುವುದರಿಂದ 18 ಕಿ.ಮೀ. ಸುತ್ತಿಬಳಸಿ ಸಂಚರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣ ಅಗತ್ಯವಿದೆ ಎಂದು ಮನವರಿಕೆ ಮಾಡಿದರು.

ಅರಾಟೆ ಸೇತುವೆ ಶಿಥಿಲ: ರಾಷ್ಟ್ರೀಯ ಹೆದ್ದಾರಿ-66ರ ಅರಾಟೆ ಸೇತುವೆ ಶಿಥಿಲಗೊಂಡಿದ್ದು, ನಾಲ್ಕು ಪಥದಲ್ಲಿ ಸಂಚರಿಸಬೇಕಾದ ವಾಹನಗಳು ಹಲವು ತಿಂಗಳಿನಿಂದ ಎರಡೇ ಪಥದಲ್ಲಿ ಸಂಚರಿಸುತ್ತಿವೆ. ಶೀಘ್ರವೇ ಹಳೇ ಅರಾಟೆ ಸೇತುವೆ ಮರುನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕು. ಬೈಂದೂರು ತಾಲೂಕು ಕಚೇರಿ ಬಳಿ ಅಂಡರ್‌ಪಾಸ್ ನಿರ್ಮಾಣ ಹಾಗೂ ಒತ್ತಿನೆಣೆ ಶ್ರೀ ರಾಘವೇಂದ್ರ ಮಠದ ತನಕ ಸರ್ವೀಸ್ ರಸ್ತೆ ನಿರ್ಮಿಸಬೇಕು ಎಂದು ಸಂಸದ ರಾಘವೇಂದ್ರ ಸಚಿವರಿಗೆ ಮನವಿ ಮಾಡಿದರು. ಸಚಿವ ನಿತಿನ್ ಗಡ್ಕರಿ ಪೂರಕವಾಗಿ ಸ್ಪಂದಿಸಿದ್ದು, ಬೇಡಿಕೆಗಳನ್ನು ಶೀಘ್ರವೇ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net