ಮೈಸೂರು: ಕಾವೇರಿ ಮತ್ತು ಕಪಿಲಾ ನದಿಯ ಪ್ರವಾಹದಿಂದ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣ ಸೇರಿದಂತೆ ಚಾಮರಾಜನಗರ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಉಂಟಾಗುತ್ತಿರುವ ಹಾನಿಯನ್ನು ತಡೆಯಲು ನದಿಗಳ ದಂಡೆಯ ಉದ್ದಕ್ಕೂ ತಡೆಗೋಡೆಗಳನ್ನು ನಿರ್ಮಿಸಲು 500 ಕೋಟಿ ರೂ. ವಿಶೇಷ ಅನುದಾನ ನೆರವು ನೀಡುವಂತೆ ಕೇಂದ್ರ ಸರ್ಕಾರದ 16ನೇ ಹಣಕಾಸು ಆಯೋಗಕ್ಕೆ ವಿಧಾನ ಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಈ ಕುರಿತು ಹಣಕಾಸು ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಅಡಿಯಲ್ಲಿ ಅನುದಾನ ಕಲ್ಪಿಸಬೇಕೆ ಎಂದು ಕೋರಿದ್ದಾರೆ. ನಂಜನಗೂಡು, ತಿ.ನರಸೀಪುರ, ಕೊಳ್ಳೇಗಾಲ ತಾಲೂಕುಗಳಲ್ಲಿ ಪ್ರವಾಹದಿಂದ ನದಿ ದಂಡೆಯ ಬದಿಯಲ್ಲಿರುವ ಗ್ರಾಮಗಳಿಗೆ ನೀರು ನುಗ್ಗುತ್ತಿದ್ದು, ಇದರಿಂದಾಗಿ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಗಮನ ಸೆಳೆದಿದ್ದಾರೆ.
ನಂಜನಗೂಡು ಹಾಗೂ ತಿ.ನರಸೀಪುರದಲ್ಲಿ 2.5 ಕಿ.ಮೀಯಿಂದ 3.5 ಕಿ.ಮೀವರೆಗೆ, ಕೊಳ್ಳೇಗಾಲ ತಾಲೂಕಿನಲ್ಲಿ 6ಕಿ.ಮೀ ಉದ್ದಕ್ಕೂ ನದಿಯ ಎರಡೂ ದಂಡೆಗಳಲ್ಲಿ ತಡೆಗೋಡೆ ನಿರ್ಮಿಸಬೇಕಿದೆ. ಇದರಿಂದ ದಶಕಗಳಿಂದಲೂ ಪ್ರವಾಹಕ್ಕೆ ಸಿಲುಕಿರುವ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಿದಂತಾಗುತ್ತದೆ. ಅಲ್ಲದೆ ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.