

ಶಿರಹಟ್ಟಿ: ಶಿರಹಟ್ಟಿಗೆ ಮಂಜೂರಾದ 100 ಹಾಸಿಗೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಹಾಗೂ ಹೆಸ್ಕಾಂ ಉಪ ವಿಭಾಗೀಯ ಕಚೇರಿ ಆರಂಭಕ್ಕೆ ಮಂಜೂರಾತಿ ನೀಡುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಡಿ. ಮಾಗಡಿ ನೇತೃತ್ವದಲ್ಲಿ ಪಪಂ ಸದಸ್ಯರು ಸಚಿವ ಎಚ್.ಕೆ. ಪಾಟೀಲ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಈ ವೇಳೆ ಎಚ್.ಡಿ. ಮಾಗಡಿ ಮಾತನಾಡಿ, ಶಿರಹಟ್ಟಿ ತಾಲೂಕಿನ ಜತೆಗೆ ಪಕ್ಕದ ತಾಲೂಕಿನ ಗ್ರಾಮಾಂತರ ಪ್ರದೇಶದ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿನ ಆಸ್ಪತ್ರೆಗೆ ಬರುತ್ತಾರೆ. 2011-12ರಲ್ಲಿ ತಾಲೂಕಾಸ್ಪತ್ರೆ ಮೇಲ್ದರ್ಜೆಗೇರಿಸಿ 100 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಅಂದಿನ ಸರ್ಕಾರ ಮಂಜೂರಾತಿ ನೀಡಿತ್ತು. 2020-21ರಲ್ಲಿ ಸರ್ಕಾರ ನೀಡಿದ ಅನುದಾನದಲ್ಲಿ ಜಮೀನು ಖರೀದಿ ಮಾಡಲಾಗಿದೆ. 2023ರ ಬಜೆಟ್‌ನಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಮೀಸಲಿಟ್ಟ ಅನುದಾನ ಹಿಂಪಡೆಯಲಾಗಿದೆ. ಇದರಿಂದ ಆಸ್ಪತ್ರೆ ನಿರ್ಮಾಣದ ಕನಸು ನನಸಾಗುವ ಲಕ್ಷಣ ಕಾಣುತ್ತಿಲ್ಲ ಎಂದು ಮನವರಿಕೆ ಮಾಡಿದರು.
ಚಿಕಿತ್ಸೆಗಾಗಿ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 30 ಹಾಸಿಗೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಗೆ ಸಮಸ್ಯೆಯಾಗಿದೆ. ಬಡರೋಗಿಗಳ ಚಿಕಿತ್ಸೆ ಹಾಗೂ ಇತರ ಸೌಲಭ್ಯ ನೀಡಲು 100 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆಯ ಅಗತ್ಯವಿದೆ. ಸರ್ಕಾರ ಕೂಡಲೇ ಅನುದಾನ ನೀಡಿ, ಆಸ್ಪತ್ರೆ ಕಟ್ಟಡ ನಿರ್ಮಾಣದ ಬಹುದಿನಗಳ ಬೇಡಿಕೆ ಈಡೇರಿಸಬೇಕು ಎಂದರು.
ಸಾರ್ವಜನಿಕರು, ರೈತರ ಹಿತದೃಷ್ಟಿಯಿಂದ ಶಿರಹಟ್ಟಿಯಲ್ಲಿ ಹೆಸ್ಕಾಂ ಉಪವಿಭಾಗೀಯ ಕಚೇರಿಯ ಅಗತ್ಯವಿದೆ. ಸರ್ಕಾರ ಮಂಜೂರಾತಿ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.