ಜಾತಿ ಗಣತಿ ದತ್ತಾಂಶದ ಸ್ಪಷ್ಟೀಕರಣ ಕೋರಿಕೆ: ಜಯಪ್ರಕಾಶ್ ಹೆಗ್ಡೆ ಅವರಿಗೆ ಸ್ನೇಹಮಯಿ ಕೃಷ್ಣ ಪತ್ರ

snehamayi krishna
Published on

ಎಲ್ಲೆಡೆ ಸೋರಿಕೆ ಆಗಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ನೀಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿ-2024ರ ಕೆಲವು ಅಂಶಗಳ ಬಗ್ಗೆ ಸ್ಪಷ್ಟನೆ ಕೋರಿ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಪತ್ರ ಬರೆದಿದ್ದಾರೆ. ಸರ್ಕಾರಕ್ಕೆ ನೀಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿ-2024ರ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಸಮಾಜದಲ್ಲಿ ಅಶಾಂತಿ ಉಂಟಾಗಿರುತ್ತದೆ. ಈ ಜಾತಿ ಸಮೀಕ್ಷೆ ಬಗ್ಗೆ ನೀವು ಒಪ್ಪಿಸಿರುವ ಜಾತಿ ಗಣತಿಯ ನೈಜತೆಯನ್ನು ಖಚಿತಪಡಿಸಿಕೊಳ್ಳಬೇಕಿದೆ. ಈ ಬಗ್ಗೆ ಈಗಾಗಲೇ ಮನವಿ ಮಾಡಿದ್ದರೂ ಇದುವರೆವಿಗೂ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ನಿಮ್ಮ ವರದಿಯನ್ನು ಆಧರಿಸಿ, ಕ್ರಮ ತೆಗೆದುಕೊಳ್ಳಲು ಸಿದ್ದರಾಮಯ್ಯನವರು ತೀರ್ಮಾನ ಮಾಡಿಕೊಂಡಿರುವುದನ್ನು ತಿಳಿದು, ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಕೆಲವು ಅಂಶಗಳಿಗೆ ಸ್ಪಷ್ಟೀಕರಣ ಕೋರುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಶ್ನೆಗಳ ವಿವರ:

ನನಗೆ ತಿಳಿದ ಪ್ರಕಾರ 2015ರಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ, ಆಯೋಗದ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜು ಅವರು ಸಹಿ ಮಾಡಿರುವುದಿಲ್ಲ ಎಂದು ತಿಳಿದುಬಂದಿರುತ್ತದೆ. ಈ ವಿಚಾರ ನಿಜವೆ ? ಅವರು ಸಹಿ ಮಾಡದಿರಲು ಕಾರಣವೇನು ? ಅವರು ಸಹಿ ಮಾಡಿಲ್ಲದಿರುವುದು ನಿಜವಾಗಿದ್ದರೆ, ಸದರಿ ಸಮೀಕ್ಷೆಯ ವರದಿ ಹೇಗೆ ಅಧಿಕೃತವಾಗುತ್ತದೆ ?

ನನಗೆ ತಿಳಿದ ಮಾಹಿತಿ ಪ್ರಕಾರ 2015ರಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಎಚ್.ಕಾಂತರಾಜು ಅವರು ಸರ್ಕಾರಕ್ಕೆ ಸಲ್ಲಿಸಿರುವುದಿಲ್ಲ. ಈ ವಿಚಾರವೂ ನಿಜವೇ? ಅವರು ಸದರಿ ಸಮೀಕ್ಷೆಯನ್ನು ಸರ್ಕಾರಕ್ಕೆ ಸಲ್ಲಿಸದಿರಲು ಕಾರಣವೇನು ?

2015ರಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಾವ ದಿನದಿಂದ, ಯಾವ ದಿನದವರೆಗೆ ನಡೆಸಲಾಗಿದೆ ? ಯಾವ ದಿನ ಸಮೀಕ್ಷೆಯ ವರದಿಯನ್ನು ಪೂರ್ಣಗೊಳಿಸಲಾಗಿರುತ್ತದೆ? ಪ್ರತಿಯೊಂದು ಮನೆಗೆ ಭೇಟಿ ನೀಡಿ, ಸಮೀಕ್ಷೆಯನ್ನು ಮಾಡಲಾಗಿರುತ್ತದೆಯೆ? ಪ್ರತಿಯೊಂದು ಕುಟುಂಬದವರಿಂದ ಖುದ್ದು ಮಾಹಿತಿ ಪಡೆದುಕೊಂಡು, ಅವರಿಂದ ಸಮೀಕ್ಷೆಯ ದಾಖಲೆಗೆ ಸಹಿಯನ್ನು ಮಾಡಿಸಿಕೊಳ್ಳಲಾಗಿದೆಯೆ ?

ಸುಮಾರು 9-10 ವರ್ಷಗಳ ಸುಧೀರ್ಘ ಸಮಯದ ಹಿಂದಿನ ದತ್ತಾಂಶ ಇಟ್ಟುಕೊಂಡು, ಅದರ ಆಧಾರದ ಮೇಲೆ ಈಗ ನೀವು ವರದಿ ಸಲ್ಲಿಸಿರುವುದು ನೈಸರ್ಗಿಕ ನ್ಯಾಯ ತತ್ವಕ್ಕೆ ಅನುಗುಣವಾಗಿದೆ ಅಂತೀರಾ?. 9-10 ವರ್ಷಗಳಲ್ಲಿ ಹುಟ್ಟು-ಸಾವುಗಳಲ್ಲಿ, ಆರ್ಥಿಕ-ಸಾಮಾಜಿಕ ಸ್ಥಾನಮಾನಗಳಲ್ಲಿ, ಶೈಕ್ಷಣಿಕ-ಉದ್ಯೋಗ ವಲಯದಲ್ಲಿ, ಇನ್ನಿತರ ವಿಚಾರಗಳಲ್ಲಿ ಸಾಕಷ್ಟು ಬದಲಾವಣೆ ಆಗಿರುವುದಿಲ್ಲವೆ ?

ವೈದ್ಯರು ತಮ್ಮ ಬಳಿ ಇರುವ 9-10 ವರ್ಷಗಳ ಹಿಂದಿನ ರೋಗಿಯೊಬ್ಬರ ಮಾಹಿತಿ/ದಾಖಲೆಗಳನ್ನು ಆಧರಿಸಿ, ಈಗ ಸದರಿ ರೋಗಿ ಆರೋಗ್ಯವಾಗಿದ್ದಾರೆ ಅಥವಾ ಅನಾರೋಗ್ಯಪೀಡಿತರಾಗಿದ್ದಾರೆ ಎಂದು ವರದಿಯನ್ನು ನೀಡಿದರೆ, ಅದು ಸೂಕ್ತವಾಗಿರುತ್ತದೆಯೆ ?

ನಿಮ್ಮ ಬಳಿ ಇರುವ ದತ್ತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಿ, ದಶಕಗಳ ಕಾಲದಿಂದ ಇರುವ ಮೀಸಲಾತಿಯನ್ನು ಉಪಯೋಗಿಸಿಕೊಂಡು, ಯಾವ ಜಾತಿಯ ಎಷ್ಟು ಕುಟುಂಬಗಳು ಉತ್ತಮ ಸ್ಥಾನವನ್ನು ಪಡೆದುಕೊಂಡಿವೆ, ಯಾವ ಜಾತಿಯ ಹೆಚ್ಚು ಜನರು ಮೀಸಲಾತಿಯನ್ನು ಬಳಸಿಕೊಂಡು ಉತ್ತಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಅಥವಾ ಕೆಲವೇ ಕೆಲವು ಕುಟುಂಬಗಳು ತಮ್ಮ ಪ್ರಭಾವವನ್ನು ಬಳಸಿಕೊಂಡು ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡಿರುತ್ತಾರೆಯೆ? ಎಂಬ ಅಂಶಗಳನ್ನು ತಿಳಿದುಕೊಂಡು, ಮೀಸಲಾತಿಯನ್ನು ಕೆಲವೇ ಕೆಲವು ವ್ಯಕ್ತಿಗಳು ಬಳಸಿಕೊಂಡು, ಇತರರಿಗೆ ಮೀಸಲಾತಿಯ ಲಾಭ ಪಡೆಯದಂತೆ ಮಾಡಿರುವ ಬಗ್ಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಸರ್ಕಾರಕ್ಕೆ ವರದಿ ನೀಡಲು ಆಯೋಗಕ್ಕೆ ಸಾಧ್ಯವಿಲ್ಲವೆ?

ಹಿಂದು ಧರ್ಮದ ಜಾತಿ, ಉಪಜಾತಿಗಳ ಸಮೀಕ್ಷೆ ಮಾಡಿರುವಂತೆ ಇತರ ಧರ್ಮಗಳಲ್ಲಿನ ಜಾತಿ, ಉಪ ಜಾತಿಗಳ ಬಗ್ಗೆಯೂ ಸಮೀಕ್ಷೆ ಮಾಡಲಾಗಿದೆಯೇ ಎಂಬ ಬಗ್ಗೆ ಅಂಶಗಳಿಗೆ ಸಂಬಂಧಿಸಿದಂತೆ ಮುಂದಿನ 15 ದಿನಗಳಲ್ಲಿ ಸ್ಪಷ್ಟಿಕರಣ ನೀಡಬೇಕಾಗಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net