ಪ್ರಶ್ನೆಪತ್ರಿಕೆ ರಚನೆಯಲ್ಲಿ ಬದಲಾವಣೆ ಆಗ್ರಹ

6 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಸ್ಸೆಸ್ಸೆಲ್ಸಿ ವಿಜ್ಞಾನ ಪ್ರಶ್ನೆಪತ್ರಿಕೆ ರಚನೆಯಲ್ಲಿ ಸೂಕ್ತ ಬದಲಾವಣೆ ತರುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ವೇದಿಕೆ ವತಿಯಿಂದ ಜಿಲ್ಲಾಡಳಿತಕ್ಕೆ ಶನಿವಾರ ಮನವಿಪತ್ರ ಸಲ್ಲಿಸಲಾಗಿದೆ.
ಸಿಬಿಎಸ್​ಇ ನಿಯಮಾವಳಿಯಂತೆ ರೂಪಣಾತ್ಮಕ ಮೌಲ್ಯ ಮಾಪನದ ಅಂದರೆ ಆಂತರಿಕ ಅಂಕಗಳನ್ನು ಸಹಿತ ಉತ್ತೀರ್ಣತೆಗೆ ಪರಿಗಣಿಸಬೇಕು. ಪಿಯುಸಿಯಂತೆಯೇ ಪ್ರಶ್ನೆಗಳ ಸ್ವರೂಪ 10ನೇ ತರಗತಿ ಮಕ್ಕಳ ಮನೋವೈಜ್ಞಾನಿಕ ಸಾಮರ್ಥ್ಯಕ್ಕೆ ಅನುಗುಣವಾಗಲಿ ಮತ್ತು ವಿದ್ಯಾರ್ಥಿ ಸ್ನೇಹಿ ವಿನ್ಯಾಸವಿರಲಿ. ಕಠಿಣತೆಯ ಮಟ್ಟ ಸರಾಸರಿಗಿಂತ ಕಡಿಮೆ ಇರುವವರಿಗೆ ಶೇ. 50, ಸರಾಸರಿಯವರಿಗೆ ಶೇ. 30 ಹಾಗೂ ಸರಾಸರಿಗಿಂತ ಅಧಿಕ ಇರುವವರಿಗೆ ಶೇ. 20 ಇದ್ದರೆ ಸೂಕ್ತ. ಪಠ್ಯ ಪುಸ್ತಕದ ಅಭ್ಯಾಸ ಕ್ರಮದಲ್ಲಿರುವ ಪ್ರಶ್ನೆಗಳನ್ನೇ ಶೇ. 50ರಷ್ಟು ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದಿನ ವರ್ಷಗಳ ಶೇ.20ರಷ್ಟು ಪ್ರಶ್ನೆಗಳು ಪುನರಾವರ್ತನೆಯಾಗಲಿ, ಶೇ. 50ರಷ್ಟು ಪ್ರಶ್ನೆಗಳು ನೇರವಾಗಿರಲಿ, ಪ್ರಶ್ನೆ ಪತ್ರಿಕೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳ ಸಂಖ್ಯೆಯನ್ನು ಕನಿಷ್ಠ 15ಕ್ಕೆ ಏರಿಸಬೇಕು. ಇತರ ರಾಜ್ಯಗಳ ಪ್ರಶ್ನೆಪತ್ರಿಕೆ ಗಮನಿಸಿದರೆ, ನಮ್ಮ ರಾಜ್ಯದಲ್ಲಿ ಬಹುಸಂಖ್ಯಾತ ಮಕ್ಕಳ ಮಾನಸಿಕ ಸಾಮರ್ಥ್ಯಕ್ಕಿಂತ ಉನ್ನತ ಮಟ್ಟದ ಪ್ರಶ್ನೆಗಳನ್ನು ನೀಡಿರುವುದು ಅವೈಜ್ಞಾನಿಕವಾಗಿದೆ. ಹೀಗಾಗಿ ಸೂಕ್ತ ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ವೇದಿಕೆ ಅಧ್ಯಕ್ಷ ಶ್ರೀಧರ ಪಾಟೀಲ ಕುಲಕರ್ಣಿ, ವಿ.ಎಸ್​.ಹುದ್ದಾರ, ವಿ.ಎಸ್​.ರೇಶ್ಮಿ, ಡಿ.ಬಿ. ದೊಡ್ಡಮನಿ, ವನಮಾಲಾ ಹೆಗಡೆ, ಸಂಜೀವಕುಮಾರ ಭೂಶೆಟ್ಟಿ, ಪ್ರಮೋದ ವಾದಿರಾಜ, ಟಿ.ಎಸ್​.ಚೌಗಲೆ, ಸಿದ್ದಪ್ಪ ಭಾವಿಕಟ್ಟಿ, ವೀಣಾ ಪತ್ತಾರ, ರಾಜಶ್ರೀ ಬೀಡಿ, ಎನ್​.ಎಸ್​.ಹಿರೇಮಠ, ಝಾಕೀರಹುಸೇನ್​ ಮುಲ್ಲಾ, ಆರ್​.ಎಂ.ನಾವಳ್ಳಿ, ಎಲ್​.ಎಂ.ಪೀರಜಾದೆ, ಆರ್​.ಬಿ. ಗುಡಿ, ಬಿ.ವಿ.ದರ್ಗಾ, ವಿಜ್ಞಾನ ಶಿಕ್ಷಕರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net