ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ ಕೋರಿಕೆ

28-SVR-2
Published on

ಸವಣೂರ: ರೈತರ ಬೇಡಿಕೆಗಳಿಗೆ ಅನುಗುಣವಾಗಿ ಪಶು ವೈದ್ಯಾಧಿಕಾರಿಗಳ ನೇಮಕ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಶಿವಯೋಗಿ ಯಲಿ ಹೇಳಿದರು.

ಪಟ್ಟಣದ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸವಣೂರ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವೈದ್ಯರ ಕೊರತೆ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಸಮರ್ಪಕ ಚಿಕಿತ್ಸೆ ಕೊರತೆ ಕಂಡು ಬರುತ್ತಿದ್ದು, ಕೂಡಲೇ ಸಮಸ್ಯೆ ಪರಿಹಾರಕ್ಕೆ ಮುಂದಾಗಲು ಯೋಜನೆ ರೂಪಿಸಲಾಗಿದೆ. ಜಾನುವಾರು ಸಂತತಿ ಕಾಪಾಡಲು ಪಶುಪಾಲನಾ ಇಲಾಖೆ ಸಹ ರೈತರಿಗೆ ನಿರಂತರ ಸಹಕಾರ ನೀಡಲು ಸಿದ್ಧವಿದೆ ಎಂದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಸಂಗಮೇಶ ಪೀತಾಂಭ್ರಶೆಟ್ಟಿ ಮಾತನಾಡಿ, ಪಶು ಇಲಾಖೆಯಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಹೋಗಲಿ, ಸರ್ಕಾರದ ಮಾರ್ಗದರ್ಶನ ಹಾಗೂ ಘೊಷಣೆಯಂತೆ ಸಹ ಚಿಕಿತ್ಸೆ ಹಾಗೂ ಸಹಕಾರ ದೊರೆಯುತ್ತಿಲ್ಲ. ಆದ್ದರಿಂದ, ಕೂಡಲೇ ವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ರೈತ ಸಂಘಟನೆ ವತಿಯಿಂದ ನಿರಂತರ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದರು.

ತಹಸೀಲ್ದಾರ್ ರವಿಕುಮಾರ ಕೊರವರ ಹಾಗೂ ತಾಲೂಕು ಪಶು ಇಲಾಖೆ ವೈದ್ಯಾಧಿಕಾರಿ ಡಾ. ನೀಲಕಂಠ ಹವಳದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಐ ದೇವಾನಂದ ಎಸ್., ರೈತ ಸಂಘದ ಪದಾಧಿಕಾರಿಗಳಾದ ಬಾಬು ಪರಾಶ, ಗಣೇಶ ಗಾಣಗೇರ, ಮಹಾಂತೇಶ ಬಂಕಾಪೂರ, ಬಸವರಾಜ ಹುಣಿಸಿಹಣ್ಣಿನವರ, ಯಲ್ಲಪ್ಪ ರಾಣೋಜಿ, ಮಂಜೂರ ಬುರಬೂರಿ, ಶಂಭುಲಿಂಗ ಹುಡೇದ, ವಸಂತ ಕಳಕಪ್ಪನವರ, ಸದಾನಂದ ಗಾಣಗೇರ, ಮಂಜುನಾಥ ಕಾಳಶೆಟ್ಟಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net