ಬೆಳೆಹಾನಿ ನಿಯಂತ್ರಿಸಲು ಕ್ರಮಕ್ಕೆ ಮನವಿ

Manavi
Published on

ಯಲ್ಲಾಪುರ: ತಾಲೂಕಿನ ಕಿರವತ್ತಿ ಭಾಗದಲ್ಲಿ ಕಾಡುಪ್ರಾಣಿಗಳಿಂದ ಬೆಳೆಹಾನಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದಿಂದ ಕಿರವತ್ತಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಿರವತ್ತಿ ವಲಯವು ದಟ್ಟ ಅರಣ್ಯದಿಂದ ಕೂಡಿದ್ದು, ಸುತ್ತಲಿನ ನಿವಾಸಿಗಳು ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡು ಬಂದಿದ್ದಾರೆ. ವಲಯ ವ್ಯಾಪ್ತಿಯ ಕಿರವತ್ತಿ, ಮದನೂರು, ಖಂಡ್ರಾನಕೊಪ್ಪ, ಮಾದೇವಕೊಪ್ಪ, ಹುಲಗೋಡ ಇತರ ಭಾಗಗಳಲ್ಲಿ ಕೃಷಿ ಜಮೀನಿಗೆ ಕಾಡುಪ್ರಾಣಿಗಳು ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಇವುಗಳ ನಿಯಂತ್ರಣಕ್ಕೆ ಇಲಾಖೆ ಕ್ರಮ ಕೈಗೊಳ್ಳಬೇಕು. ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯವಾದ ಪರಿಕರಗಳನ್ನು ಇಲಾಖೆ ರೈತರಿಗೆ ವಿತರಿಸಬೇಕು. ಬೆಳೆಹಾನಿಯಾದ ರೈತರಿಗೆ ಪರಿಹಾರ ಒದಗಿಸಿಕೊಡಬೇಕೆಂದು ಸಂಘಟನೆಯ ಪ್ರಮುಖರು ಒತ್ತಾಯಿಸಿದರು.

ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ವಿಲ್ಸನ್ ಫರ್ನಾಂಡೀಸ್, ಎಸ್‌ಸಿ/ಎಸ್ಟಿ ಘಟಕದ ಅಧ್ಯಕ್ಷ ಚೆನ್ನಪ್ಪ ಹರಿಜನ, ಹರೂನ್ ಶೇಖ್, ಸುಭಾಸ ಹರಿಜನ, ದಲಿತ ಸಂಘರ್ಷ ಸಮಿತಿ ಉಪಾಧ್ಯಕ್ಷ ಅಶೋಕ ಬಿ.ಎಚ್., ಸ್ಥಳೀಯರಾದ ಮಹಮ್ಮದ್ ಅಲಿ ಪಟೇಲ್, ಅಲೆಕ್ಸ್ ಸಿದ್ದಿ, ಜಾಫರ್ ಒಂಟಿ, ಇಮಾವ್ ಹುಸೇನ್ ಕಣವಿ, ಗಣಪತಿ ಶಿರನಾಳಕರ್, ಕೃಷ್ಣ ಲಮಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net