

ಗುರುಪುರ: ಬೈಕಂಪಾಡಿ ಮೊಗವೀರ ಮಹಾಸಭಾ ಆಡಳಿತಕ್ಕೆ ಒಳಪಟ್ಟಿರುವ 120 ವರ್ಷಕ್ಕೂ ಹಿಂದೆ ನಿರ್ಮಿಸಿರುವ ಹಳೇ ಶಾಲೆ ಪುನಃ ನವೀಕರಣ ಪ್ರಯುಕ್ತ ನೂತನ ಕಟ್ಟಡಕ್ಕೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಬೈಕಂಪಾಡಿಯ ಇಂದಿರಾ ಮಾಧವ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಮನವಿ ಪತ್ರ ಬಿಡುಗಡೆ ಮಾಡಿ ಮಾತನಾಡಿ, ಬೈಕಂಪಾಡಿ ಆಂಗ್ಲ ಮಾಧ್ಯಮ ಶಾಲೆ ಮಾನ್ಯತೆಗಾಗಿ ಈಗಾಗಲೇ ಮನವಿ ನೀಡಲಾಗಿದೆ. ನೂತನ ಕಟ್ಟಡ ನಿರ್ಮಾಣದೊಂದಿಗೆ ಇಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸುವ ಕುರಿತು ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಿ ಅನುಮತಿ ಪಡೆಯುವೆ ಎಂದರು.
ಈ ಸರ್ಕಾರಿ ಶಾಲೆಯಲ್ಲಿ ಈಗ 450 ಮಕ್ಕಳು ಕಲಿಯುತ್ತಿರುವುದು ಸಂತೋಷ, ಬಹು ಅಪೂರ್ವ ಸಂಗತಿಯಾಗಿದೆ. ಶಾಲೆಯಲ್ಲಿ ಬೈಕಂಪಾಡಿಯ ವಲಸೆ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿರುವ ಬಗ್ಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ-ಮೇಯರ್ ಸುನಿತಾ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ರಾಮಚಂದರ್ ಬೈಕಂಪಾಡಿ, ಮಹಾಸಭಾ ಅಧ್ಯಕ್ಷ ವಸಂತ ಅಮೀನ್, ಮನಪಾ ಕಾರ್ಪೊರೇಟರ್ ಸುಮಿತ್ರಾ ಕರಿಯ, ಶಿಕ್ಷಣ ತಜ್ಞ ವಾಸುದೇವ ಐತಾಳ ಪಿ., ವಿವಿಧ ಕಂಪೆನಿಗಳ ಅಧಿಕಾರಿಗಳು, ಮಹಾಸಭಾದ ಗುರಿಕಾರರು, ಸದಸ್ಯರು ಉಪಸ್ಥಿತರಿದ್ದರು.