ಹುಬ್ಬಳ್ಳಿ: ಮಂಡ್ಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಿಲ್ಲಾಡಳಿತ ಹಾಗೂ ಕಸಾಪ ಕೇಂದ್ರ ಸಮಿತಿ ಅರ್ಹರ ಹೆಸರು ನೀಡಲಿ ಎಂದು ಮುಖ್ಯಮಂತ್ರಿಗಳು ಹೇಳಿರುವುದು ಸೂಕ್ತವಲ್ಲ ಎಂದು ಇಲ್ಲಿಯ ಚಿಂತನ ವೇದಿಕೆ ಅಭಿಪ್ರಾಯಪಟ್ಟಿದೆ.
ಸರ್ವಾಧ್ಯಕ್ಷರ ಆಯ್ಕೆ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು. ಎಂದಿನಂತೆ ಕಸಾಪ ರಾಜ್ಯಮಟ್ಟದ ಸಮಿತಿ ಇದನ್ನು ನಿರ್ವಹಣೆ ಮಾಡಲಿ. ಆದರೆ, ಪಾರದರ್ಶಕ ಆಯ್ಕೆ ನಡೆಯಲಿ ಎಂದು ವೇದಿಕೆ ತಿಳಿಸಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಯಾವುದಾದರು ಒಂದು ಗುಂಪು ಗುರುತಿಸಿದವರ ಆಯ್ಕೆ ಸಲ್ಲದು ಎಂದು ವೇದಿಕೆಯ ಕೃಷ್ಣಮೂರ್ತಿ ಕುಲಕರ್ಣಿ ಹಾಗೂ ಡಿ.ಡಿ.ಎಂ. ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಕ್ಷ ರಾಜಕೀಯ, ಗುಂಪುಗಾರಿಕೆ ಕೈಬಿಟ್ಟು ಸಾಹಿತ್ಯದಲ್ಲಿ ಕಾರ್ಯ ಮಾಡಿದ ಯಾರೇ ಆಗಲಿ ಅವರನ್ನು ಗುರುತಿಸಿ ಗೌರವಿಸಲಿ ಎಂದು ವೇದಿಕೆಯ ಚನ್ನಬಸಪ್ಪ ಧಾರವಾಡಶೆಟ್ರು, ರಾಮು ಮೂಲಗಿ, ವಿ.ಜಿ. ಪಾಟೀಲ, ವಂದನಾ ರಮೇಶ ಮುಂತಾದವರು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಈಮೇಲ್ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.