

ಕೋಲಾರ: ಸಂವಿಧಾನದ ಆಶಯಕ್ಕೆ ಪೂರಕವಾಗಿ ದೇಶವನ್ನು ಸುಭಿಕ್ಷಗೊಳಿಸಲು ಪ್ರತಿಯೊಬ್ಬರೂ ಶ್ರಮಿಸೋಣ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಕರೆ ನೀಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ 71ನೇ ಗಣರಾಜೋತ್ಸವದಲ್ಲಿ ಮಾತನಾಡಿ, ಸಮಸಮಾಜ ನಿರ್ಮಾಣಕ್ಕೆ ಪಣತೊಟ್ಟರೆ ಸುಭಿಕ್ಷ ದೇಶ ಕಟ್ಟಬಹುದು ಎಂದರು.
ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಒಗ್ಗಟ್ಟಿನಿಂದ ದುಡಿಯೋಣ ಎಂದರು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕೆಸಿ ವ್ಯಾಲಿ ಯೋಜನೆ ಜಾರಿಗೆ ತಂದಿದ್ದು, ಈಗಾಗಲೆ 48 ಕೆರೆಗಳು ಭರ್ತಿಯಾಗಿವೆ. ಕೆಸಿ ವ್ಯಾಲಿ ಯೋಜನೆ ಎರಡನೇ ಹಂತದಲ್ಲಿ 251 ಕೆರೆಗಳಿಗೆ ನೀರು ಹರಿಸಲು 450 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಜಲಶಕ್ತಿ ಹಾಗೂ ಜಲಾಮೃತ ಯೋಜನೆಯಡಿ ಕೋಲಾರಮ್ಮ ಮತ್ತು ನರಸಾಪುರ ಕೆರೆ ಅಭಿವೃದ್ಧಿಪಡಿಸಿ ಪ್ರವಾಸಿತಾಣ ಮಾಡಲಾಗುವುದು. ಆಪರೇಷನ್ ಗ್ರೀನ್ಸ್ ಯೋಜನೆಯಡಿ ಟೊಮ್ಯಾಟೊ ಸಂಸ್ಕರಣೆಗೆ ಉತ್ತೇಜನ ನೀಡಲಾಗಿದೆ. ಮಾಲೂರಿನಲ್ಲಿ ಮಾವನ್ನು ಬೇರೆ ರಾಷ್ಟ್ರಗಳಿಗೆ ರಫ್ತು ಮಾಡಲು ಸೌಲಭ್ಯ ನೀಡಲಾಗಿದೆ. ಕೇಂದ್ರ ಸರ್ಕಾರ ಪ್ರಕಟಿಸಿರುವ ದೇಶದ ಅರಣ್ಯ ಇಲಾಖೆ ವರದಿಯಲ್ಲಿ ಜಿಲ್ಲೆಯಲ್ಲಿ 61.39 ಚದರ ಕಿಮೀ ಅರಣ್ಯದ ವಿಸ್ತೀರ್ಣ ವೃದ್ಧಿಯಾಗಿದೆ ಎಂದರು.
ಶಿಕ್ಷಣ ಇಲಾಖೆಯಲ್ಲೂ ಸುಧಾರಣಾ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಾರಿಯ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಫೆ.6, 7 ಹಾಗೂ 8ರಂದು ಆಯೋಜಿಸಲು ಸರ್ಕಾರ ಅವಕಾಶ ಕಲ್ಪಿಸಿದೆ ಎಂದ ಅವರು, 6 ಪುಟಗಳ ಭಾಷಣವನ್ನು 16 ನಿಮಿಷಗಳಲ್ಲಿ ಓದಿ ಮುಗಿಸಿದರು.
ಅಂಬೇಡ್ಕರ್ ಸ್ಮರಣೆ: ಸ್ವಾತಂತ್ರ್ಯ ನಂತರ ಭಾರತವನ್ನು ಗಣತಂತ್ರ ರಾಷ್ಟ್ರವನ್ನಾಗಿಸಲು ಡಾ.ಅಂಬೇಡ್ಕರ್ ಸಂವಿಧಾನ ರಚಿಸಿದ ಫಲದಿಂದ ಪ್ರಜೆಗಳ ಕೈಗೆ ಪ್ರಭುತ್ವ ಸಿಕ್ಕಿದಂತಾಗಿದೆ. ನಮ್ಮ ಜಿಲ್ಲೆಯವರೇ ಆದ ಟಿ.ಚನ್ನಯ್ಯನವರು ಸಂವಿಧಾನ ರಚನಾ ಸಮಿತಿ ಸದಸ್ಯರಲ್ಲಿ ಒಬ್ಬರಾಗಿದಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.
ಪಥ ಸಂಚಲನದಲ್ಲಿ 25 ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 20 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉತ್ತಮ ಪ್ರದರ್ಶನ ನೀಡಿದ ಸರ್ಕಾರಿ ಕಾಲೇಜಿನ ಎನ್‌ಸಿಸಿ ತಂಡ ಮೊದಲ ಸ್ಥಾನ ಪಡೆದರೆ, ಭಾರತ ಸೇವಾದಳ ಹಾಗೂ ಭಾರತ್ ಸ್ಕೌಟ್ಸ್ ತಂಡ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆಯಿತು. ಶಾಲಾ ವಿಭಾಗದಲ್ಲಿ ಸುವರ್ಣ ಸೆಂಟ್ರಲ್ ಸ್ಕೂಲ್, ಆರ್.ವಿ.ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ಮಹಿಳಾ ಸಮಾಜ ಶಾಲೆ ಬಹುಮಾನ ಪಡೆದವು.
ನಗರಸಭೆಯ ಇಬ್ಬರು ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ಕಟ್ಟಲು ತಲಾ 50 ಸಾವಿರ ರೂ.ಗಳನ್ನು ಸಚಿವ ಎಚ್.ನಾಗೇಶ್ ವಿತರಿಸಿದರು.
ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷೆ ಯಶೋದಮ್ಮ, ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ಎಸ್ಪಿ ಕಾರ್ತಿಕ್ ರೆಡ್ಡಿ, ಎಎಸ್ಪಿ ಜಾಹ್ನವಿ, ಎಡಿಸಿ ಪುಷ್ಪಲತಾ, ಎಸಿ ಸೋಮಶೇಖರ್, ತಹಸೀಲ್ದಾರ್ ಶೋಭಿತಾ ಇನ್ನಿತರರು ಉಪಸ್ಥಿತರಿದ್ದರು.
ಮೊದಲ ಅವಕಾಶ: ಮೊದಲ ಬಾರಿಗೆ ಎಚ್.ನಾಗೇಶ್‌ಗೆ ಕೋಲಾರದಲ್ಲಿ ನಡೆದ ಜಿಲ್ಲಾಮಟ್ಟದ ರಾಷ್ಟ್ರೀಯ ಹಬ್ಬದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು, ಸಂದೇಶ ವಾಚನದಲ್ಲಿ ಎಲ್ಲೂ ಎಡವದೆ ಬರೆದುಕೊಟ್ಟಿದ್ದ ಭಾಷಣವನ್ನು ತಪ್ಪಿಲ್ಲದೆ ಓದಿ ಗಮನ ಸೆಳೆದರು.
ಮಕ್ಕಳ ಆಕರ್ಷಣೆ: ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಸೊಗಸಾಗಿ ಮೂಡಿಬಂತು. ನಾಗೇಶ್ ತೆರೆದ ವಾಹನದಲ್ಲಿ ಸಂಚರಿಸಿ ಪಥ ಸಂಚಲನ ತಂಡಗಳಿಂದ ಧ್ವಜವಂದನೆ ಸ್ವೀಕರಿಸಿದರು.
ಬಿಗಿ ಭದ್ರತೆ: ಗಣ ರಾಜ್ಯೋತ್ಸವಕ್ಕೆ ಉಗ್ರದಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಜನರನ್ನು ತಪಾಸಣೆ ಮಾಡಲು ಡಿಟೆಟ್ಕರ್ ಬಳಸಿಕೊಳ್ಳಲಾಗಿತ್ತು.