ಗಣರಾಜ್ಯೋತ್ಸವ ಕಾರ್ಯಕ್ರಮದ ಜವಾಬ್ದಾರಿ ನಮಗೆ ಬೇಡ: ಜಿಪಂ, ಪಿಡಬ್ಲ್ಯೂಡಿಗೆ ಒಪ್ಪಿಸಿ ಎಂದ ಕುಷ್ಟಗಿ ತಾಪಂ ಅಧಿಕಾರಿ

200122 Kushtagi Republic Day Preparatory Meeting
ಕುಷ್ಟಗಿಯ ತಹಸಿಲ್ ಕಚೇರಿಯಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು.
Published on

ಕುಷ್ಟಗಿ: ಗಣರಾಜ್ಯೋತ್ಸವ ಆಚರಣೆ ವೇಳೆ ಕೋವಿಡ್ ನಿಯಮ ಪಾಲನೆ ಕಡ್ಡಾಯ ಎಂದು ಗ್ರೇಡ್ 2 ತಹಸೀಲ್ದಾರ್ ಮುರುಳಿಧರ ಹೇಳಿದರು. ಪಟ್ಟಣದ ತಹಸಿಲ್ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಬೆಳಗ್ಗೆ 7.30ರೊಳಗೆ ಎಲ್ಲ ಇಲಾಖೆ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಪ್ರೌಢಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬೇಕು ಎಂದರು. ಕಾರ್ಯಕ್ರಮ ಆಯೋಜನೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಈ ವೇಳೆ ತಾಪಂನವರು ಪೆಂಡಾಲ್ ವ್ಯವಸ್ಥೆ ಮಾಡಬೇಕು ಎಂದಾಗ, ಆಕ್ಷೇಪ ವ್ಯಕ್ತಪಡಿಸಿದ ತಾಪಂ ವ್ಯವಸ್ಥಾಪಕ ಬಸವರಾಜ ಪಾಟೀಲ್, ನಮ್ಮ ಇಲಾಖೆಗೆ ಯಾವುದೇ ಜವಾಬ್ದಾರಿ ಬೇಡ. ಆದಾಯ ಬರುವ ಜಿಪಂ, ಪಿಡಬ್ಲುೃಡಿ, ನೀರು ಮತ್ತು ನೈರ್ಮಲ್ಯದಂತಹ ಇಲಾಖೆಗೆ ವಹಿಸಿ ಎಂದರು.

ಕಾರ್ಯಕ್ರಮ ತಾಪಂ ಸಹಯೋಗದಲ್ಲಿಯೇ ನಡೆಯುತ್ತದೆ. ಹೀಗಿರುವಾಗ ನಾವೇಕೆ ಖರ್ಚು ಮಾಡಬೇಕು ಎಂದು ವ್ಯವಸ್ಥಾಪಕ ಬಸವರಾಜ ಹೇಳಿದರು. ಪೆಂಡಾಲ್ ವ್ಯವಸ್ಥೆಯನ್ನು ಬೇರೆ ಇಲಾಖೆಗೆ ವಹಿಸಲಾಗುವುದು ಎಂದು ಗ್ರೇಡ್ 2 ತಹಸೀಲ್ದಾರ್ ತಿಳಿಸಿದರು. ಶಿರಸ್ತೇದಾರ್ ಸತೀಶ, ಸಿಡಿಪಿಒ ಅಮರೇಶ ಹಾವಿನ್ ಹಾಗೂ ಇತರ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net