ತ್ರಿಕಾಲ ಜ್ಞಾನವೇ ಭಾರತೀಯರ ಯಶಸ್ಸು

web 3 (3)
Published on

ಚಿಕ್ಕಮಗಳೂರು: ಗಣರಾಜ್ಯೋತ್ಸವ ಸಂಭ್ರಮದ ಭಾರತೀಯರ ಪಾಲಿಗೆ ಆತ್ಮಾವಲೋಕನ ಹಾಗೂ ಸಂಕಲ್ಪದ ಸುದಿನವಾಗಬೇಕು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಮಂಗಳವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭೂತಕಾಲದ ನಮ್ಮ ಪರಂಪರೆ, ವರ್ತಮಾನದ ಸಮಸ್ಯೆ, ಸಂಕಟ ಹಾಗೂ ಭವಿಷ್ಯದ ಕನಸು ಇವುಗಳ ಬಗ್ಗೆ ಅರಿವು-ಸ್ಪಷ್ಟತೆ ಇರಬೇಕು ಎಂದರು.

ವರ್ತಮಾನದಲ್ಲಿ ಭೂತ ಕಾಲದ ವಿದ್ಯಮಾನಗಳ ಬಗೆಗೆ ವಿಮರ್ಶೆ, ಟೀಕೆ ಮಾಡುವುದು ಸುಲಭ. ಆದರೆ ಆ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಹಾಗೂ ಸಂವಿಧಾನಕ್ಕಾಗಿ ನಮ್ಮ ಹಿರಿಯರು ಹಸಿವು, ನಿದ್ರೆ, ತ್ಯಾಗಮಾಡಿ ನಮ್ಮೆಲ್ಲರಿಗೆ ಭಾರತೀಯರು ಎನ್ನುವ ಗೌರವ ತಂದುಕೊಡಲು ಶ್ರಮಿಸಿದರು ಎನ್ನುವುದನ್ನು ಅರಿಯಬೇಕು. ತ್ರಿಕಾಲ ಜ್ಞಾನವೇ ಭಾರತೀಯರ ಯಶಸ್ಸು, ಸುಭಿಕ್ಷೆ, ಸಮೃದ್ಧಿಗೆ ದಾರಿದೀಪ ಎಂದು ವಿಶ್ಲೇಷಿಸಿದರು.

ಶಾಂತಿ ನಮ್ಮ ಮಂತ್ರ, ಸಹನೆ ನಮ್ಮ ಶಕ್ತಿ, ಸೌಹಾರ್ದತೆ ನಮ್ಮ ಹುಟ್ಟುಗುಣ. ಕೂಡಿ ಬಾಳುವುದು ನಮ್ಮ ಪರಂಪರೆ. ಅನೇಕತೆಯಲ್ಲಿ ಏಕತೆ ನಮ್ಮ ವಿಶೇಷ. ಸರ್ವಧರ್ಮ ಸಮಭಾವ ನಮ್ಮ ಶ್ರೇಷ್ಠತೆ. ಎಲ್ಲರೊಳಗೊಂದಾಗುವುದು ನಮ್ಮತನ. ಸಕಲ ಜೀವಾತ್ಮಗಳನ್ನು ಪ್ರೀತಿಸುವುದು ನಮ್ಮ ಔದಾರ್ಯ. ಈ ಗುಣಗಳು ಪ್ರತಿಯೊಬ್ಬ ಭಾರತೀಯನಲ್ಲಿ ಬೀಜಾಂಕುರಗೊಳ್ಳಬೇಕು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತೀಯ ಬಾಂಧವ್ಯದ ಎಳೆಗಳು ಗಟ್ಟಿಗೊಳ್ಳಬೇಕು. ಈ ಕಾರಣದಿಂದಲೇ ಕೇಂದ್ರ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ನಾವೆಲ್ಲಾ ಒಂದು ಎನ್ನುವ ನುಡಿಯನ್ನು ಸಾರ್ಥಕ ಮಾಡುವ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net