

ಮಂಡ್ಯ: ಜಪಾನ್‌ನ ಇಥಮಿ ನಗರದಲ್ಲಿ ನಡೆಯುತ್ತಿರುವ ‘ವಿದ್ಯಾರ್ಥಿ ವಿನಿಮಯ’ ಕಾರ್ಯಕ್ರಮದಲ್ಲಿ ನಗರದ ಹೊರವಲಯದ ಸಿದ್ದಯ್ಯನಕೊಪ್ಪಲಿನ ಪ್ರತಿಷ್ಠಿತ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್‌ನ ಇಬ್ಬರು ವಿದ್ಯಾರ್ಥಿಗಳು ಕಮಾಲ್ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ.
ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ತಾಲೂಕಿನ ಎ.ಹುಲ್ಲುಕೆರೆ ಗ್ರಾಮದ ಎಚ್.ಟಿ.ಪ್ರಭು ಹಾಗೂ ಬಿ.ಕೆ.ರಜನಿ ದಂಪತಿಯ ಮಗ ಅಜಿತ್ ಪಿ.ಗೌಡ ಹಾಗೂ ಚಾಮಲಾಪುರದ ಜಿ.ಎಸ್.ಹರಿಪ್ರಸಾದ್ ಹಾಗೂ ಎಚ್.ಎನ್.ಮಾಲಾ ದಂಪತಿಯ ಮಗಳು ಹಿತಶ್ರೀ ಪ್ರಸಾದ್ ಅವರು ಶೈಕ್ಷಣಿಕ ಪ್ರವಾಸದಲ್ಲಿದ್ದಾರೆ. ಅದರಂತೆ ಜಪಾನ್‌ನ ಕೊನ್ನಿಚಿವಾ ಶಿಕ್ಷಣ ಸಂಸ್ಥೆಯಲ್ಲಿ ಮೂರ‌್ನಾಲ್ಕು ದಿನದಿಂದ ಕಲಿಕೆಯಲ್ಲಿ ವಿದ್ಯಾರ್ಥಿಗಳು ನಿರತರಾಗಿದ್ದಾರೆ.
ಮಾತ್ರವಲ್ಲದೆ ವಿದೇಶದಲ್ಲಿ ಕನ್ನಡವನ್ನು ಪಸರಿಸುವುದರ ಜತೆಗೆ ನಮ್ಮ ಸಂಸ್ಕೃತಿಯನ್ನೂ ಪರಿಚಯಿಸುತ್ತಿದ್ದಾರೆ. ಅದರಂತೆ ಶಿಕ್ಷಣ ಸಂಸ್ಥೆಯಲ್ಲಿ ಕೆಜಿಎಫ್-2 ಹಾಗೂ ಕಾಂತಾರ ಚಿತ್ರವನ್ನು ಪ್ರದರ್ಶಿಸಿದ್ದಾರೆ. ಜತೆಗೆ ಚಿತ್ರದ ಕುರಿತು ಪ್ರಶ್ನೊತ್ತರಗಳನ್ನು ಕೇಳಿದ್ದಾರೆ. ಸರಿಯಾದ ಉತ್ತರ ನೀಡಿದ ಜಪಾನ್ ವಿದ್ಯಾರ್ಥಿಗಳಿಗೆ ಕನ್ನಡದ ಅಕ್ಷರವಿರುವ ಅಂದರೆ ಕನ್ನಡಿಗ, ಮಂಡ್ಯ, ಸಕ್ಕರೆನಾಡು, ಪುನೀತ್‌ರಾಜ್‌ಕುಮಾರ್ ಹಾಗೂ ಯಕ್ಷಗಾನದ ಚಿತ್ರವಿರುವ ಟೀ ಶರ್ಟ್‌ಗಳನ್ನು ವಿತರಿಸಿ ಸಂಭ್ರಮಿಸಿದ್ದಾರೆ.
ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ವಿದ್ಯಾರ್ಥಿಗಳು
‘ತಂತ್ರಜ್ಞಾನದ ಅನುಕೂಲ ಮತ್ತು ಅನಾನುಕೂಲಗಳ’ ಬಗ್ಗೆ ನಡೆದ ಮೂರು ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ವಿದ್ಯಾರ್ಥಿ ವಿನಿಮಯಕ್ಕೆ ಆಯ್ಕೆಯಾಗಿದ್ದಾರೆ. ಇಡೀ ರಾಜ್ಯದಲ್ಲಿ ಈ ಕಾರ್ಯಕ್ರಮಕ್ಕೆ ಆಯ್ಕೆಯಾದ ಶಾಲೆ ಇದಾಗಿದೆ.
ಈ ಕಾರ್ಯಕ್ರಮಕ್ಕೆ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್‌ನಿಂದ ಮೊದಲ ಸುತ್ತಿನಲ್ಲಿ 78 ವಿದ್ಯಾರ್ಥಿಗಳು ಸ್ಪರ್ಧಿಸಿ ಪರೀಕ್ಷೆ ಬರೆದಿದ್ದರು. 2ನೇ ಸುತ್ತಿಗೆ 12 ವಿದ್ಯಾರ್ಥಿಗಳು ಆಯ್ಕೆಯಾಗಿ ಪ್ರಾಯೋಗಿಕ ಪ್ರದರ್ಶನ ನೀಡಿದರು. ಮೂರನೇ ಸುತ್ತಿಗೆ 6 ವಿದ್ಯಾರ್ಥಿಗಳು ಆಯ್ಕೆಯಾಗಿ ಓರಲ್‌ನಲ್ಲಿ ಅಂತಿಮವಾಗಿ ಅಜಿತ್ ಪಿ.ಗೌಡ, ಹಿತಶ್ರೀ ಪ್ರಸಾದ್ ಆಯ್ಕೆಯಾದರು. ಭಾರತದಿಂದ ಒಟ್ಟು 25 ವಿದ್ಯಾರ್ಥಿಗಳು ಜಪಾನ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ಛತ್ತೀಸ್‌ಗಢದಿಂದ 23 ಹಾಗೂ ನಮ್ಮ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ತೆರಳಿದ್ದಾರೆ. ಹ್ಯೋಗೊ ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಸಂಸ್ಥೆ ವಿದ್ಯಾರ್ಥಿಗಳ ಸಂಪೂರ್ಣ ಖರ್ಚು ವೆಚ್ಚವನ್ನು ಭರಿಸಲಿದೆ. ಕಾರ್ಯಕ್ರಮದ ಅವಧಿಯಲ್ಲಿ ಅಲ್ಲಿನ ಶೈಕ್ಷಣಿಕ ವ್ಯವಸ್ಥೆ, ಪ್ರವಾಸಿತಾಣಗಳ ಪರಿಚಯ, ಸಂಸ್ಕೃತಿಯನ್ನು ನಮ್ಮ ವಿದ್ಯಾರ್ಥಿಗಳು ತಿಳಿದುಕೊಳ್ಳಲಿದ್ದು, ನಮ್ಮ ವ್ಯವಸ್ಥೆಯ ಬಗ್ಗೆ ಅಲ್ಲಿ ತಿಳಿಸಲಿದ್ದಾರೆ. ಜತೆಗೆ ಎರಡು ದಿನ ಅಲ್ಲಿನ ವಿದ್ಯಾರ್ಥಿಗಳ ಮನೆಯಲ್ಲಿ ವಾಸ್ತವ್ಯವಿರಲಿದ್ದಾರೆ. ಇನ್ನು 2023ರಲ್ಲಿ ಜಪಾನ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಧನ್ಯ ಜಿ.ಗೌಡ ಹಾಗೂ ಶಾನ್ ಸ್ಟೀವನ್ ಡಾಲ್ಮೇಡ ಅವರು ಆಯ್ಕೆಯಾಗಿದ್ದರು. ಅಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು.